
ಆಪರೇಷನ್ ಸಿಂಧೂರ ಮೂಲಕ ಭಾರತದ ಶಕ್ತಿ ವಿಶ್ವಕ್ಕೆ ತೋರಿಸಿ ಕೊಟ್ಟಿದೆ: ಕ್ಯಾ. ಬ್ರಿಜೇಶ್ ಚೌಟ
ಮಂಥನ ವೇದಿಕೆ ಸುಳ್ಯ ವತಿಯಿಂದ ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ‘ಸಿಂಧೂರ ವಿಜಯ ಭಾರತದತ್ತ ವಿಶ್ವದ ಚಿತ್ತ’ ರಾಷ್ಟ್ರೀಯ ವಿಚಾರಗಳ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಭಾರತದ ಬೆಳವಣಿಗೆಯನ್ನು ಸಹಿಸದ ಶಕ್ತಿಗಳು ದೇಶದ ಮೇಲೆ ಭಯೋತ್ಪಾದನೆಯ ಮೂಲಕ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬೆಳೆಯಬಾರದು, ಅಲ್ಲಿ ಅಭಿವೃದ್ಧಿ ಆಗಬಾರದು ಎಂದು ನಿರಂತರ ದಾಳಿ ನಡೆದಿತ್ತು. ಪಹಲ್ಗಾಮ್ನಲ್ಲಿಯೂ ಈ ರೀತಿಯ ಭಯೋತ್ಪಾದನೆ ದಾಳಿ ನಡೆದಿದೆ. ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಪಾಕ್ ಬೆಂಬಲಿತ ಭಯೋತ್ಪಾದನೆಯ ವಿರುದ್ಧ ಸ್ಪಷ್ಟ ಸಂದೇಶ ನೀಡಿದೆ ಎಂದರು. ಭಾರತದ ಈ ನಿಲುವಿಗೆ 193 ರಾಷ್ಟ್ರಗಳ ಪೈಕಿ 3 ರಾಷ್ಟ್ರ ಬಿಟ್ಟು ಬೇರೆ ಯಾವ ದೇಶವೂ ವಿರೋಧ ಮಾಡಿಲ್ಲ. ಭಾರತದ ವಿರುದ್ಧ ನಡೆಯುವ ಯಾವುದೇ ಭಯೋತ್ಪಾದನೆ ದಾಳಿಯನ್ನು ಯುದ್ಧ ಎಂದು ಪರಿಗಣಿಸಿ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿದ್ದೇವೆ ಎಂದು ಅವರು ಹೇಳಿದರು.
ಯುದ್ಧ ಭೂಮಿಯನ್ನು ಮೀರಿದ ಯುದ್ಧದ ಸ್ಥಿತಿ ಇಂದು ಇದೆ, ಆದುದರಿಂದಲೇ ಅತ್ಯಂತ ಜವಾಬ್ದಾರಿಯುತ ರಾಷ್ಟ್ರವಾದ ಭಾರತ ಜವಾಬ್ದಾರಿಯಿಂದ ವರ್ತಿಸಿದೆ. ಅತ್ಯಂತ ನಿಖರವಾಗಿ ಗುರಿಯನ್ನು ನಿರ್ಧರಿಸಿ ಆಪರೇಷನ್ ಸಿಂಧೂರ ನಡೆಸಿದೆ. ದೇಶ ರಕ್ಷಣೆಯಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ, ಆದುದರಿಂದ ಪ್ರತಿಯೊಬ್ಬ ಪ್ರಜೆಯೂ ಸೈನಿಕನ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಸೈನಿಕ ಪರಂಪರೆಯನ್ನು ನೆನಪಿಸಿ ಗೌರವಿಸಬೇಕು ಎಂದು ಹೇಳಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು ಭಾರತದ ಈಗಿನ ಸ್ಥಿತಿ ಹಾಗೂ ನಿಲುವುಗಳ ಬಗ್ಗೆ ವಿದೇಶ ರಾಷ್ಟ್ರಗಳು ಗೌರವಿಸುತ್ತವೆ ಮತ್ತು ದೇಶವನ್ನು ಜಾಗತಿಕ ಶಕ್ತಿಯಾಗಿ ಗುರುತಿಸಿವೆ ಎಂದು ಹೇಳಿದರು. ದ.ಕ.ಜಿಲ್ಲೆಯಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಗೆ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತಿದೆ ಎಂದು ಅವರು ಉತ್ತರಿಸಿದರು.
ಪುರುಷೊತ್ತಮ ಕಿರ್ಲಾಯ, ಪ್ರವೀಣ್ ರಾವ್ ದೊಡ್ಡತೋಟ, ಭರತ್ ಅಡೂರು, ಕಿರಣ್ ಪುಷ್ಪಗಿರಿ, ವಿಕ್ರಮ್ ಎ.ವಿ, ನಂದನ್ ಐವರ್ನಾಡು, ಮೋಹನ್ ಐವರ್ನಾಡು ಅಡ್ಡಂತ್ತಡ್ಕ ದೇರಣ್ಣ ಗೌಡ ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಆರ್ಎಸ್ಎಸ್ ಮುಖಂಡರಾದ ನ.ಸೀತಾರಾಮ ಮತ್ತಿತರರು ಭಾಗವಹಿಸಿದ್ದರು.
ಮಂಥನ ವೇದಿಕೆಯ ಸಂಚಾಲಕರಾದ ಪ್ರದ್ಯುಮ್ನ ಉಬರಡ್ಕ ಅಧ್ಯಕ್ಣತೆ ವಹಿಸಿ ಸ್ವಾಗತಿಸಿದರು. ಕಿಶನ್ ಜಬಳೆ ವಂದಿಸಿದರು. ಎಸ್.ಪಿ. ಸುದರ್ಶನ ಸೂರ್ತಿಲ ವಂದೇ ಮಾತರಂ ಹಾಡಿದರು. ಮಧುರಾ ಎಂ.ಆರ್ ಮತ್ತು ಕುಸುಮಾಧರ ಎ.ಟಿ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ವಕೀಲರು, ವೈದ್ಯರು, ಉಪನ್ಯಾಸಕರು ಹಾಗೂ ಶಿಕ್ಷಕರು ಮತ್ತು ಚಿಂತಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸೇನೆಯಲ್ಲಿರುವಾಗ ಹುತಾತ್ಮರಾದ ಹಾಗೂ ನಿವೃತ್ತರಾದ ಬಳಿಲ ಅಗಲಿದ 30ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ, ಯೋಧರ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಯೋಧರ ಭಾವಚಿತ್ರಗಳಿಗೆ ನಮನ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಆಪರೇಷನ್ ಸಿಂಧೂರ ಹೋರಾಟದ ವೀಡಿಯೋ ತುಣುಕು ಪ್ರದರ್ಶಿಸಲಾಯಿತು.