ಆರ್‌ಟಿಎ ಸಭೆ: 28 ರೂಟ್‌ಗಳಲ್ಲಿ ಸರಕಾರಿ ಬಸ್ ಸಂಚಾರ, ಪರ ವಿರೋಧ
ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಪಡೀಲ್‌ನ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೆಎಸ್‌ಆರ್‌ಟಿಸಿಯಿಂದ ಸಲ್ಲಿಕೆಯಾಗಿರುವ ನೂತನ ರೂಟ್‌ಗಳಲ್ಲಿ ಬಸ್ಗಳ ಅಗತ್ಯವಿದೆಯೇ ಎಂಬ ಬಗ್ಗೆ ಜಂಟಿ ಸಮೀಕ್ಷೆಯ ನಡೆಸಿದ ಬಳಿಕವೇ ಪರವಾನಿಗೆ ನಿರ್ಧಾರ ಕೈಗೊಳ್ಳಬೇಕು ಎಂದು ಖಾಸಗಿ ಬಸ್ಸು ಮಾಲಕರ ಪರ ವಕೀಲರಾದ ಎಂ.ವಿ. ನಾಗೇಶ್, ಪರಸರ ಕುಮಾರ್ ವಾದಿಸಿದರು.
ಕೆಎಸ್‌ಆರ್‌ಟಿಸಿ ಪರವಾಗಿ ವಾದಿಸಿದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಾಧಿಕಾರಿ ರಾಜೇಶ್ ಶೆಟ್ಟಿ, ಸಾರ್ವಜನಿಕರಿಂದ ಹಲವು ರೂಟ್‌ಗಳಿಗೆ ಬಸ್‌ಗಳ ಬೇಡಿಕೆ ಬಂದಲ್ಲಿಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಖಾಸಗಿ ಬಸ್ಸುಗಳು ಇರುವಲ್ಲಿಯೂ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಕೆಎಸ್‌ಆರ್ಟಿಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಸರಕಾರದಿಂದ ನಗರಕ್ಕೆ 100 ಇಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಲಾಗಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆಯ ಅನುಕೂಲ ನಗರದ ಮಹಿಳೆಯರಿಗೂ ಸಿಗಬೇಕೆಂಬ ಬೇಡಿಕೆ ಇದೆ. ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ದ.ಕ.ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಪರ್ತಿಪಾಡಿ, ರಾಜೇಶ್ ಶೆಟ್ಟಿ ವಾದಿಸಿದರು.
ಬಸ್ ಒದಗಿಸಿ..
ಜಿಲ್ಲಾಧಿಕಾರಿ ಕಚೇರಿ ಪಡೀಲ್ಗೆ ಸ್ಥಳಾಂತರಗೊಂಡಿರುವ ಕಾರಣ ಕೃಷ್ಟಾಪುರ, ಕುಂಜತ್ತಬೈಲ್, ಮಂಗಳಾದೇವಿ, ಸುಲ್ತಾನ್ ಬತ್ತೇರಿ ಒದಲಾದ ಕಡೆಗಳಿಗೆ ನೇರ ಬಸ್ಸುಗಳ ಸೌಲಭ್ಯ ಒದಗಿಸಬೇಕು. ಇದರಿಂದ ಸ್ಟೇಟ್‌ಬ್ಯಾಂಕ್ ಸುತ್ತಮುತ್ತ ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಡಿಎಂ ನೋಟಿಫಿಕೇಶನ್ ಕೂಡಾ ರದ್ದುಪಡಿಸಬಹುದು ಎಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಸಭೆಯಲ್ಲಿ ಆಗ್ರಹಿಸಿದರು.
ನಗರದ ನಂತೂರ್, ಪಂಪ್‌ವೆಲ್ ಮೊದಲಾದ ಕಡೆಗಳಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ನಗರದಲ್ಲಿ ಟ್ಯಾಂಕರ್ಗಳ ಸಂಚಾರಕ್ಕೆ ನಿಷೇಧ ಹೇರಬೇಕು ಎಂದು ಸಾರ್ವಜನಿಕರ ಪರವಾಗಿ ಜಿ.ಕೆ. ಭಟ್ ಆಗ್ರಹಿಸಿದಾಗ, ಈ ಬಗ್ಗೆ ಪರಿಶೀಲಿಸುವುದಾಗಿ ಎಸ್ಪಿ ಡಾ. ಅರುಣ್ ಕುಮಾರ್ ಹೇಳಿದರು.
ವಿರೋಧ..
ಇ ಆಟೋ ರಿಕ್ಷಾಗಳ ಪರವಾನಿಗೆಗೆ ಸಂಬಂಧ ರಾಜ್ಯ ಸರಕಾರದಿಂದ ಇತ್ತೀಚೆಗೆ ಹೊರಡಿಸಲಾಗಿರುವ ಆದೇಶದ ಕುರಿತಂತೆ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಲಯ ವಿಂಗಡಣೆಗೆ ಅವಕಾಶ ನೀಡದಂತೆ ಯಥಾಸ್ಥಿತಿ ಕಾಪಾಡ ಬೇಕು ಎಂಬ ಆಗ್ರಹ ಇ ಆಟೋ ರಿಕ್ಷಾ ಚಾಲಕರ ಪರವಾಗಿ ಮಾತನಾಡಿದ ವಿಶ್ವನಾಥ್, ಪ್ರಜೇಶ್, ಮುಹಮ್ಮದ್ ರಿಯಾಝ್ ಆಗ್ರಹಿಸಿದರು.
ಡಿಸಿಪಿ ರವಿಶಂಕರ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.