
ಆಗಸ್ಟ್ 5ರಂದು ಬೀದಿಬದಿವ್ಯಾಪಾರಸ್ಥರ ಜಿಲ್ಲಾ ಸಮಾವೇಶ
ಮಂಗಳೂರು: ಬೀದಿಬದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ, ಬೀದಿ ವ್ಯಾಪಾರಿಗಳ ಮೇಲಿನ ಧಾಳಿ, ದಬ್ಬಾಳಿಕೆ ವಿರೋಧಿಸಿ, ಬೀದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಗಾಗಿ ಪಿ ಎಂ ಸ್ವ ನಿಧಿ ಸಾಲ ಯೋಜನೆಯನ್ನು ಪುನರಾರಾಂಭಿಸಲು ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶ ಆಗಸ್ಟ್ 5ರಂದು ಬೆಳಗ್ಗೆ 10ಗಂಟೆಗೆ ನಗರದ ಪೊಲೀಸ್ ಲೇನ್ ನಾಸಿಕ್ ಬಂಗೇರ ಸಭಾಭವನದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ರಿ) CITU ಇದರ ನೇತೃತ್ವದಲ್ಲಿ ನಡೆಯುವ ಈ ಸಮಾವೇಶದ ಉದ್ಘಾಟನೆಯನ್ನು ವಕೀಲರು ಮತ್ತು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಎಂ. ಭಟ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಜ್, ಕಾನೂನು ಸಲಹೆಗಾರ ಚರಣ್ ಶೆಟ್ಟಿ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಮುಜಾಫರ್ ಅಹಮದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬೀದಿಬದಿ ವ್ಯಾಪಾರಸ್ಥರ ಪ್ರತಿನಿಧಿಗಳು ಭಾಗವಹಿಸಿ, ಜಿಲ್ಲೆಯ ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳು, ಬೀದಿ ವ್ಯಾಪಾರದ ಕಾನೂನು ಅನುಷ್ಠಾನದ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಲಿದ್ದು ಬೀದಿಬದಿ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.