
ಹಿಂದೂ ಜನಜಾಗೃತಿ ಸಮಿತಿಯಿಂದ ರಾಷ್ಟ್ರಧ್ವಜದ ಗೌರವ ರಕ್ಷಣೆಗಾಗಿ ಕರೆ: ಪ್ಲಾಸ್ಟಿಕ್ ಧ್ವಜಗಳ ನಿಷೇಧ ಮತ್ತು ಜಾಗೃತಿ ಸಮಿತಿ ಸ್ಥಾಪನೆಗೆ ಆಗ್ರಹ
ಹಿಂದೂ ಜನಜಾಗೃತಿ ಸಮಿತಿಯ ಪ್ರಕಾರ, ಆ.15 ಮತ್ತು ಜ.26 ರಂದು ಹೆಮ್ಮೆಯಿಂದ ಪ್ರದರ್ಶಿಸಲಾಗುವ ರಾಷ್ಟ್ರಧ್ವಜಗಳು, ಅದೇ ದಿನ ಸಂಜೆ ರಸ್ತೆಗಳಲ್ಲಿ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಸುಲಭವಾಗಿ ವಿಘಟಿಸದ ಕಾರಣ, ಅವು ದೀರ್ಘಕಾಲದವರೆಗೆ ಅಗೌರವಕ್ಕೆ ಒಳಗಾಗುತ್ತವೆ.
ಈ ಸಮಸ್ಯೆಯನ್ನು ನಿವಾರಿಸಲು, ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಹೈಕೋರ್ಟ್‌ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ 103/2011) ಅನ್ನು ಸಲ್ಲಿಸಿತ್ತು. ಈ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜಗಳಿಂದಾಗುವ ಅಗೌರವವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಅದರಂತೆ, ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಹಾಗೂ ಶಿಕ್ಷಣ ಇಲಾಖೆಯು ಈ ಸಂಬಂಧ ಸುತ್ತೋಲೆಗಳನ್ನು ಹೊರಡಿಸಿದ್ದವು. ಇದಲ್ಲದೆ, ಕೇಂದ್ರ ಸರ್ಕಾರವು ‘ಪ್ಲಾಸ್ಟಿಕ್ ನಿಷೇಧ’ ನೀತಿಯನ್ನು ಜಾರಿಗೆ ತಂದಿದ್ದು, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟವು ಕಾನೂನುಬಾಹಿರವಾಗಿದೆ ಎಂದು ಘೋಷಿಸಿದೆ.
ಇದು ‘ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ, 1950’ ಮತ್ತು ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ, 1971’ರ ಉಲ್ಲಂಘನೆಯಾಗಿದೆ. ಹೈಕೋರ್ಟ್ ಮತ್ತಷ್ಟು ಸ್ಪಷ್ಟಪಡಿಸಿದಂತೆ, ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗುವುದನ್ನು ತಡೆಯಲು ‘ಕೃತಿ ಸಮಿತಿ’ (ಕಾರ್ಯಪಡೆ) ಸ್ಥಾಪಿಸುವಂತೆ ಮತ್ತು ಅದರಲ್ಲಿ ಸಾಮಾಜಿಕ ಸಂಘಟನೆಗಳನ್ನು ಸೇರಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಪ್ಲಾಸ್ಟಿಕ್ ರಾಷ್ಟ್ರಧ್ವಜಗಳಿಂದ ಆಗುವ ಅವಮಾನವನ್ನು ತಡೆಯಲು ಕರಪತ್ರಗಳು, ಫಲಕಗಳು, ಜಾಹೀರಾತುಗಳು ಮುಂತಾದ ವಿವಿಧ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸುವುದು ಈ ಸಮಿತಿಯ ಅಪೇಕ್ಷೆಯಾಗಿದೆ.
ಕಳೆದ 21 ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರಧ್ವಜಕ್ಕೆ ಅವಮಾನಿಸುವುದರ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ. ಈ ಪ್ರಯತ್ನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸಗಳು, ಪ್ರಶೋತ್ತರ ಸ್ಪರ್ಧೆಗಳು, ಕರಪತ್ರಗಳ ವಿತರಣೆ, ಪೋಸ್ಟರ್-ಫ್ಲೆಕ್ಸ್‌ಗಳ ಅಳವಡಿಕೆ, ಸ್ಥಳೀಯ ಕೇಬಲ್ ಚಾನೆಲ್‌ಗಳಲ್ಲಿ ವಿಡಿಯೋಗಳ ಪ್ರದರ್ಶನ, ರಸ್ತೆಗಳಲ್ಲಿ ಬಿದ್ದಿರುವ ರಾಷ್ಟ್ರಧ್ವಜಗಳ ಸಂಗ್ರಹಣೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕಾರ್ಯಗಳು ಸೇರಿವೆ.
ಸರ್ಕಾರದ ಮುಂದೆ ಇಟ್ಟಂತಹ ಬೇಡಿಕೆಗಳು:
ರಾಷ್ಟ್ರಧ್ವಜ ಗೌರವ ಕೃತಿ ಸಮಿತಿ ಸ್ಥಾಪನೆ: ರಾಷ್ಟ್ರಧ್ವಜಕ್ಕೆ ಅವಮಾನವಾಗುವುದನ್ನು ತಡೆಯಲು ತಕ್ಷಣವೇ ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕು.,
ಪ್ಲಾಸ್ಟಿಕ್ ಧ್ವಜಗಳ ಮಾರಾಟದ ಮೇಲೆ ಕ್ರಮ: ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆ, ಕೂಡಲೇ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಶಾಲಾ-ಕಾಲೇಜುಗಳಲ್ಲಿ ಜಾಗೃತಿ: ಶಾಲೆಗಳಲ್ಲಿ ‘ರಾಷ್ಟ್ರಧ್ವಜವನ್ನು ಗೌರವಿಸಿ’ ಎಂಬ ಉಪಕ್ರಮವನ್ನು ನಡೆಸಲು ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಅವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗವೀರ, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಎಲ್.ಕೆ. ಸುವರ್ಣ, ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರವೀಣ್ ಚಂದ್ರ ರಾವ್, ವಕೀಲರಾದ ಯತೀಶ್ ಬಜಾಲ್, ಯೋಗಿಶ್ ಜಪ್ಪಿನ ಮೊಗರು, ಹಿಂದೂ ಸೇವಾ ಸಮಿತಿಯ ಸುರೇಂದ್ರ ಜಪ್ಪಿನ ಮೊಗರು, ವಕೀಲರಾದ ಪದ್ಮನಾಭ ಆಚಾರ್ಯ, ಹಿಂದೂ ಮಹಾಸಭೆಯ ರಾಜ್ಯ ಖಚಾಂಚಿಯಾದ ಲೋಕೇಶ್ ಕುತ್ತಾರು, ಸಾಮಾಜಿಕ ಹೋರಾಟಗಾರರಾದ ಉಮೇಶ್ ರಾವ್ ಮತ್ತು ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.