
ಅಂದು ಕನ್ಯಾಡಿಯಲ್ಲಿ ಧರ್ಮಸ್ಥಳವನ್ನು ಮುಜರಾಯಿ ಮಾಡುತ್ತೇನೆ ಎಂದು ಬೊಬ್ಬಿರಿಸಿ ಸೋತ ಪೂಜಾರಿಗೆ ಏಕೆ ಶವರಾಜಕೀಯ
ಮಂಗಳೂರು: ಧರ್ಮಸ್ಥಳ ಶವ ಶೋಧ ಕ್ಲೈಮ್ಯಾಕ್ಸ್‌ಗೆ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಬಿ. ಜನಾರ್ಧನ ಪೂಜಾರಿ ಅವರು ಪ್ರವೇಶ ಪಡೆದಿದ್ದಾರೆ. ಪೂಜಾರಿಯವರು ನಿನ್ನೆ ಪತ್ರಿಕಾ ಹೇಳಿಕೆ ನೀಡಿ, ತನ್ನ ಭಾಷಣದಲ್ಲಿ ಶವಶೋಧ ಪ್ರಕರಣವನ್ನು, ಧರ್ಮಸ್ಥಳ ಹೊರತಾದ ಚರ್ಚ್, ಮಸೀದಿಗಳಿಗೂ ವಿಸ್ತರಿಸಿ ಧರ್ಮಸ್ಥಳದ ಆಡಳಿತಕ್ಕೆ ತನ್ನ ಸ್ಥಿಮಿತವಿಲ್ಲದ ‘ಬೆಂಬಲ’ ಸೂಚಿಸಿದ್ದಾರೆ.
ಪೂಜಾರಿಯವರು ಧರ್ಮಸ್ಥಳ ಶವಶೋಧದ ವಿಷಯದಲ್ಲಿ ಚರ್ಚ್ ಮತ್ತು ಮಸೀದಿಯನ್ನು ಎಳೆದು ತಂದದ್ದು ಖಂಡನೀಯ. ಅದು ಅವರಿಗೆ ಈ ಇಳಿ ವಯಸ್ಸಿನಲ್ಲಿ ಅಗತ್ಯ ಇರಲಿಲ್ಲ. ಅಂದು ಪೂಜಾರಿಯ ರಾಜಕೀಯ ವಿಜೃಂಭಣೆ ಸಮಯದಲ್ಲಿ, ಕನ್ಯಾಡಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಧರ್ಮಸ್ಥಳವನ್ನು ಮುಜರಾಯಿ ಮಾಡುತ್ತೇನೆಂದು ಬೊಬ್ಬಿರಿಸಿದ ಫಲವೇ ಅವರ ಸೋಲಿಗೆ ಕಾರಣವಾಯಿತು!. ಪೂಜಾರಿಯ ಸೋಲಿನ ಹಿಂದೆ ಅಂದು ಫೀಲ್ಡ್ ಮಾಡಿದ್ದು, ಇದೇ ಧರ್ಮಸ್ಥಳದ ಮುಖ್ಯಸ್ಥರು ಎಂಬುದನ್ನು ಪೂಜಾರಿಯವರು ಮರೆತಿದ್ದಾರೆ.
ಅಂದು, ಇಂದು, ಎಂದು ಪೂಜಾರಿಗೆ ಮತ್ತು ಬಿಲ್ಲವ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದು, ಇಂದು ಮಸೀದಿಗಳ ದಫನ ಸ್ಥಳದಲ್ಲಿ ಶವವಾಗಿ ಮಲಗಿದ ಮತ್ತು ಭವಿಷ್ಯದಲ್ಲಿ ಇನ್ನೂ ಶವವಾಗಿ ಮಲಗಲಿರುವ ಮುಸ್ಲಿಮರು ಎಂಬುದನ್ನು ಚೆನ್ನಾಗಿ ಅರಿಯಲಿ, ಈ ಪೂಜಾರಿ ಅವರಿಗೆ ಏಕೆ ಬೇಕು ಈ ಇಳಿ ವಯಸ್ಸಿನಲ್ಲಿ ಶವ ರಾಜಕೀಯ, ಪಂಕ್ತಿಭೇದ ವಿರೋಧಿಸಿ ಸಮಾನತೆಯನ್ನು ಪ್ರತಿಪಾದಿಸಿದ ಬ್ರಹ್ಮ ಶ್ರೀ ನಾರಾಯಣ ಗುರುಗಳ ವಚನಗಳನ್ನು ಪಠಿಸಿ ಧ್ಯಾನದಲ್ಲಿ ಮಗ್ನರಾಗಲಿ ಎಂದು ಮಾಜಿ ಮೇಯರ್, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.