ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಧಾರ್ಮಿಕ ಕೇಂದ್ರಗಳಲ್ಲಿ ಜನರಿಗೆ ತಿಳುವಳಿಕೆ ನೀಡಬೇಕು: ದಿನೇಶ್ ಗುಂಡೂರಾವ್

ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಧಾರ್ಮಿಕ ಕೇಂದ್ರಗಳಲ್ಲಿ ಜನರಿಗೆ ತಿಳುವಳಿಕೆ ನೀಡಬೇಕು: ದಿನೇಶ್ ಗುಂಡೂರಾವ್


ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ದೇವಸ್ಥಾನ, ಮಸೀದಿ, ಚಚ್‌ರ್‌ಗಳ ಧಾರ್ಮಿಕ ಮುಖಂಡರು ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಜನರಿಗೆ ತಿಳುವಳಿಕೆ ನೀಡಬೇಕು. ಸಾಮರಸ್ಯದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಮಾಜದ ಜನರಿಗೆ ಮನದಟ್ಟು ಮಾಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. 

ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಆಕರ್ಷಕ ಪಥ ಸಂಚಲನದೊಂದಿಗೆ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ  ನೀಡಿದರು.

ಕಲೆ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲೂ ಸಹ ಸಾಮರಸ್ಯ ಸಂದೇಶ ಸಾರುವತ್ತ ಕಲಾವಿದರು ಹೆಚ್ಚಿನ ಗಮನ ಹರಿಸಬೇಕು. ಹಿಂಸೆಗೆ ಅವಕಾಶ ನೀಡದೇ ಜಿಲ್ಲೆಯ  ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಎಲ್ಲಾ ಮಹಾನ್ ಚೇತ ನಗಳಿಗೂ ನಮನ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಜಿಲ್ಲೆಯಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೆ ಅವಕಾಶವಿಲ್ಲದೇ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಕೋಮು  ಪ್ರಕರಣಗಳ ಮೂಲವನ್ನು ಅರಿಯಲು ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಮುಖಂಡರೊಂದಿಗೆ ಶಾಂತಿ ಸೌಹಾರ್ಧ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ  ಮೂಡಿಬಂದ ಒಮ್ಮತದ ಅಭಿಪ್ರಾಯದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಪೊಲೀಸ್ ತಂಡಗಳು, ಸಶಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳದ ವಿದ್ಯಾರ್ಥಿಗಳ ಶಿಸ್ತಿನ ಪಥ ಸಂಚಲನ  ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಾವೀನ್ಯತೆ, ಸೃಜನಶೀಲತೆ  ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿ ಅಂತಾರಾಷ್ಟ್ರೀಯ ಪುರಸ್ಕಾರ ಪಡೆದಿರುವ ಉಳ್ಳಾಲ ಮೂಲದ ಸಿಂಧೂರ ರಾಜ ಅವರಿಗೆ ಗೌರವಾಭಿನಂದನೆ ನಡೆಯಿತು.

ಪಥ ಸಂಚಲನದಲ್ಲಿ ಭಾರತ ಸೇವಾದಳ ಪ್ರಥಮ ಹಾಗೂ ಎನ್‌ಸಿಸಿ ಆರ್ಮಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸದಸ್ಯ ಹರೀಶ್ ಕುಮಾರ್, ಐಜಿಪಿ ಅಮಿತ್ ಸಿಂಗ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ನರ್ವಾಡೆ, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಧ್ವಜಾರೋಹಣದ ಬಳಿಕ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಂದೂರ್‌ನ ಸೈಂಟ್ ಆಗ್ನೆಸ್ ಸಿಬಿಎಸ್‌ಇ ಶಾಲೆ, ಮಣ್ಣಗುಡ್ಡ ಮಂಗಳಾ ಆಂಗ್ಲ ಮಾಧ್ಯಮ ಶಾಲೆ,  ಸುರತ್ಕಲ್‌ನ ಗೋವಿಂದ ದಾಸ ಕಾಲೇಜು, ಅತ್ತಾವರದ ಮಧುಸೂದನ್ ಕುಶೆ ಪ.ಪೂ. ಕಾಲೇಜು, ಬಲ್ಮಠದ ಸ.ಪ.ಪೂರ್ವ ಮತ್ತು ಪ್ರಥರ್ಮ ದರ್ಜೆ ಕಾಲೇಜು  ವಿದ್ಯಾರ್ಥಿಗಳು ಹಾಗೂ ರೋಹಿಣಿ ಉದಯ್ ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಸ್ವಾತಂತ್ರ್ಯೋತ್ಸವ ಸಂದೇಶದ ವೇಳೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಬಗ್ಗೆ ವಿವರ ನೀಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಲೋಕೋ ಪಯೋಗಿ ಇಲಾಖೆಯಿಂದ ಗುರುವಾಯನಕೆರೆ- ಉಪ್ಪಿನಂಗಡಿ-ಪುತ್ತೂರು ಹೆದ್ದಾರಿಯನ್ನು ೧೩ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದೇ ರೀತಿ  ಸುಬ್ರಮಣ್ಯ-ಮಂಜೇಶ್ವರ ರಸ್ತೆ, ಕಡೂರು-ಕಾಞಂಗಾಡ್ ರಸ್ತೆ, ಸುರತ್ಕಲ್-ಕಬಕ ರಸ್ತೆಗಳ ಆಯ್ದ ಭಾಗಗಳಲ್ಲಿ ದ್ವಿಪಥ, ಸೇತುವೆ ಅಗಲೀಕರಣ, ಎತ್ತರಿಸುವಿಕೆ ಮತ್ತಿತರ  ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಉಳ್ಳಾಲ ಕೋಟೆಪುರದಿಂದ ಮಂಗಳೂರು ನಗರದ ಸಂಪರ್ಕಕ್ಕೆ ಬೋಳಾರದವರೆಗೆ 200 ಕೋಟಿ ರೂ. ವೆಚ್ಚದಲ್ಲಿ ನೂತನ ಬೃಹತ್ ಸೇತುವೆ ಹಾಗೂ ಬಂಟ್ವಾಳ  ತಾಲೂಕು ಸಜಿಪ ನಡು ಮತ್ತು ತುಂಬೆ ಗ್ರಾಮದ ಮಧ್ಯೆ ನೇತ್ರಾವತಿ ನದಿಗೆ ರೂ. 60 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ ಅನುಮೋದನೆ  ನೀಡಿದೆ. ಈ ಎರಡು ಸೇತುವೆಗಳ ನಿರ್ಮಾಣದಿಂದ ಈ ಎಲ್ಲ ಪ್ರದೇಶಗಳ ಅಭಿವೃದ್ಧಿ ಹಾಗೂ ಜನ ಸಂಚಾರದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಮಾಸ್ಟರ್ ಪ್ಲಾನ್‌ನ 3ನೇ ಹಂತದಲ್ಲಿ ಸುಮಾರು 400 ಕೋಟಿ ರೂ.ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ದಿ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು ಪ್ರಸಕ್ತ ವರ್ಷದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article