ವಿದ್ಯಾರ್ಥಿಗಳು ಹೊಸರಾಷ್ಟ್ರವನ್ನು ಕಟ್ಟುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು: ಗೀತಾ ಕುಲಕರ್ಣಿ
Friday, August 15, 2025
ಮಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಾಜಕೀಯವನ್ನು ಮೀರಿ ದೇಶಸೇವೆಗಾಗಿ ನಮ್ಮ ಪೂರ್ವಜರು ತೊಡಗಿಸಿಕೊಂಡಿದ್ದರು, ಅಂತೆಯೇ ಇಂದು ವಿದ್ಯಾರ್ಥಿಗಳು ಹೊಸರಾಷ್ಟ್ರವನ್ನು ಕಟ್ಟುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಂಗಳೂರು ನಗರ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ ಹೇಳಿದರು.
ಅವರು ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್‌ಪೋಢಿಯಂನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯವೂ ಒಂದು ಘಟನೆಯಲ್ಲ ಅದು ನಮ್ಮ ದೈನಂದಿನ ಕರ್ತವ್ಯವೆಂದು ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಸ್ವಾತಂತ್ರ್ಯ ಸಂಗ್ರಾಮವು ಇತಿಹಾಸದ ಪುಟಗಳಲ್ಲಿ ರಾಷ್ಟ್ರೀಯತೆಯನ್ನು ದಾಖಲಿಸಿದೆ. ಭವಿಷ್ಯದಲ್ಲಿ ದೇಶದ ಸಮಗ್ರತೆಯ ಚಿಂತನೆಯನ್ನು ಸಾಕಾರಗೊಳಿಸುವಲ್ಲಿ ನಾವು ಕರ್ತವ್ಯ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ಸ್ವಾತಂತ್ರ್ಯಾನಂತರ ಭಾರತವು ಎದುರಿಸಿದ ಸವಾಲುಗಳು ಅನೇಕ, ಜನಸಂಖ್ಯಾ ಸ್ಪೋಟ ಸೇರಿದಂತೆ ಮೂಲಸೌಕರ್ಯಗಳ ಅನೇಕ ಸವಾಲುಗಳಿಗೆ ಹೊಸತಲೆಮಾರು ಉತ್ತರವನ್ನು ನೀಡುವ ಮೂಲಕ ಭಾರತವು ಇಂದು ಸಾಧಿಸಿತೋರಿಸಿದೆ. ಭಾರತವನ್ನು ಮುನ್ನೆಡೆಸಲು ಯುವಮನಸ್ಸುಗಳು ಕೂಡ ತಮ್ಮ ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ನೂತನವಾಗಿ ಆಯ್ಕೆಯಾದ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಭೋದಿಸುವ ಮೂಲಕ ವಿದ್ಯಾರ್ಥಿಗಳು ಭವ್ಯ ಭಾರತದಲ್ಲಿ ಉತ್ತಮ ಪ್ರಜೆಗಳಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಸುರೇಶ್ ಪೈ, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್ ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಬ್ರಾಹ್ಮೀ ಮಯ್ಯ, ಉಪಾಧ್ಯಕ್ಷರಾಗಿ ಸ್ತುತಿಶ್ರೀ ಬಿಆರ್, ಕಾರ್ಯದರ್ಶಿಯಾಗಿ ನಿಹಾರಿಕಾ ಆರ್. ನಾಯಕ್, ಜಂಟಿ ಕಾರ್ಯದರ್ಶಿಯಾಗಿ ಶ್ರೀಶ ಸಿ.ಎಂ., ಶಿಸ್ತು-ಬಾಲಕರ ವಿಭಾಗ ರಿಷಿಕ್ ಎಂ., ಶಿಸ್ತು-ಬಾಲಕಿಯರ ವಿಭಾಗ ತ್ರಿಶ ಎಸ್. ವಿದ್ಯಾರ್ಥಿಗಳು ಅಧಿಕಾರವನ್ನು ಸ್ವೀಕರಿಸಿದರು.



