ಸಹಸ್ರಾರು ಜನರ ತ್ಯಾಗ ಬಲಿದಾನವನ್ನು ಕಾಪಾಡುವ ಮಹತ್ವದ ಜವಾಬ್ದಾರಿ ಯುವ ಜನಾಂಗದ ಮೇಲಿದೆ: ಲೆ.ಕ. ನಿತಿನ್ ನಾರಾಯಣ್
Friday, August 15, 2025
ಮಂಗಳೂರು: ದೇಶಕ್ಕೆ ಹೋರಾಡಿದ ಸಹಸ್ರಾರು ಜನರ ತ್ಯಾಗ ಬಲಿದಾನವನ್ನು ಕಾಪಾಡುವ ಮಹತ್ವದ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು 18ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಘಟಕ ಮಂಗಳೂರಿನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ನಿತಿನ್ ನಾರಾಯಣ್ ಅವರು ಶುಕ್ರವಾರ ಕರೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಏಳಿಗೆಗೆ ಶ್ರಮಿಸುವ ಮೂಲಕ ಯುವ ಜನಾಂಗ ತಮ್ಮ ಕೊಡುಗೆ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ. ಎಸ್, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇದ್ದ ದೇಶದ ಬಗೆಗಿನ ಕಾಳಜಿ ಇಂದು ಕ್ಷೀಣಿಸುತ್ತಿದ್ದು, ಯುವ ಸಮೂಹ ಭಾರತದ ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಂಡು ದೇಶ ಸೇವೆಗೆ ಮುಂದಾಗಬೇಕು ಎಂದು ತಿಳಿಸಿದರು.
ನೇತಾಜಿ ಸುಭಾಶ್ ಚಂದ್ರಬೋಸ್ ರಂತಹ ಕ್ರಾಂತಿಕಾರಿ ಹೋರಾಟಗಾರರು ಸೇರಿದಂತೆ, ಸಹಸ್ರಾರು ಜನರು 1857 ರಿಂದ 1947ರವರೆಗೆ ತಮ್ಮ ಜೀವ, ಆಸ್ತಿ-ಪಾಸ್ತಿ, ಸಂಬಂಧಿಕರನ್ನು ಕಳೆದುಕೊಂಡು ಬ್ರಿಟೀಷರ ವಿರುದ್ಧ ಹೋರಾಡಿದ್ದರೂ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹಾತ್ಮ ಗಾಂಧಿ ನೇತೃತ್ವದ ಅಹಿಂಸಾತ್ಮಕ ಹೋರಾಟ, ಅಸಹಕಾರ ಚಳುವಳಿ ಮಹತ್ವದ ಪಾತ್ರವಹಿಸಿದೆ ಎಂದ ಅವರು, ಮಹಾತ್ಮ ಗಾಂಧಿಯವರಿಗೆ ದೇಶ ವಿಭಜನೆಯಾಗುವುದು ಇಷ್ಟವಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲೇಜಿನ ಎನ್.ಸಿ.ಸಿ ನೌಕಾದಳದ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಪ್ರೊ. ಯತೀಶ್ ಕುಮಾರ್ ಅವರು ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ಎನ್.ಎಸ್.ಎಸ್ ವಿದ್ಯಾರ್ಥಿಗಳು ಪ್ರಾರ್ತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಎನ್. ನಿರೂಪಿಸಿದರು. ಕಾಲೇಜಿನ ಎನ್.ಸಿ.ಸಿ ಭೂದಳದ ಅಧಿಕಾರಿ ಮೇಜರ್ ಡಾ. ಜಯರಾಜ್ ಎನ್. ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೇಶವ ಮೂರ್ತಿ, ಎನ್.ಎಸ್.ಎಸ್ ಅಧಿಕಾರಿ ಡಾ. ಸುರೇಶ್ ಉಪಸ್ಥಿತರಿದ್ದರು.
ಪ್ರಾಂಶುಪಾಲರು ಧ್ವಜಾರೋಹಣವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.







