‘ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಪ್ರತಿಯೊಬ್ಬ ಮಹಾತ್ಮರನ್ನೂ ನಾವು ಸ್ಮರಿಸಬೇಕು’: ನಿತಿನ್ ಆರ್. ಭಿಡೆ

‘ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಪ್ರತಿಯೊಬ್ಬ ಮಹಾತ್ಮರನ್ನೂ ನಾವು ಸ್ಮರಿಸಬೇಕು’: ನಿತಿನ್ ಆರ್. ಭಿಡೆ

ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ


ಮಂಗಳೂರು: ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲ ಮಹಾತ್ಮರನ್ನು ನಾವು ಸ್ಮರಿಸಬೇಕು. ಸ್ವಾತಂತ್ರ್ಯವನ್ನು ಪಡೆಯಲು ಅವರು ಮಾಡಿದ ತ್ಯಾಗದಿಂದ ನಾವು ಇಂದು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ. ನಮಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು 100ನೇ ಸ್ವಾತಂತ್ರ್ಯ ದಿನದ ಆಚರಣೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ಹೇಗೆ ಆಚರಿಸಬಹುದೆಂದು ನಾವು ಯೋಚಿಸಬೇಕಾಗಿದೆ ಎಂದು ನಿವೃತ್ತ ಕರ್ನಲ್ ನಿತಿನ್ ಆರ್. ಭಿಡೆ ಹೇಳಿದರು.

ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.


ಅಂದು ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾರತದ ಸಂಸ್ಥಾನಗಳ ಏಕೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ ಇಂದು ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಅಷ್ಟೆ ಅಲ್ಲದೆ ನಮ್ಮ ಸಂವಿಧಾನ ರಚನಕಾರರಿಂದ ಹಿಡಿದು, 79 ವರ್ಷಗಳಿಂದ ಗಡಿಯನ್ನು ಕಾಪಾಡಿಕೊಂಡು ಬರುತ್ತಿರುವ ಯೋಧರನ್ನು ನಾವು ಮರೆಯಬಾರದು. ಆಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆಂದು ತಿಳಿಸಿದರು.

ನಾನು ಸಣ್ಣವನಿದ್ದಾಗ ನನ್ನ ಕೋಣೆಯಲ್ಲಿ ಭಾರತದ ನಕ್ಷೆಯನ್ನು ಬಿಡಿಸುತ್ತಿದ್ದೆ. ಆದರೆ ಇಂದು ಆ ಗಡಿ ಎಲ್ಲಿದೆ ಎಂದು ಅಲ್ಲಿಯೇ ಹೋಗಿ ನೋಡಬಲ್ಲೆ. ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗಿದರೆ ಎಲ್ಲವೂ ಸಾಧ್ಯ. ನಾವು ಹೆಮ್ಮೆಯ ಭಾರತೀಯರಾಗಿ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು, 79ನೇ ಸ್ವಾತಂತ್ರ್ಯ ದಿನಾಚರಣೆ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿದ್ದೇವೆ ಎಂಬುದೇ ನಮ್ಮ ಹೆಮ್ಮೆ. ನಮ್ಮ ಹಿಂದಿನವರು ಸ್ವಾತಂತ್ರ್ಯವಿಲ್ಲದೆ, ಬ್ರಿಟಿಷರ ಕೈಯಾಳುಗಳಾಗಿ ನೂರರಿಂದ ಇನ್ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿದ್ದರಿಂದ ಅವರಿಗೆ ಸ್ವತಂತ್ರ್ಯದ ಅರ್ಥ ಚೆನ್ನಾಗಿ ತಿಳಿದಿತ್ತು. ಸುಖದೊಂದಿಗೆ ದುಃಖವನ್ನು ಅನುಭವಿಸಿದಾಗ ಮಾತ್ರ ಸ್ವತಂತ್ರ ಬದುಕಿನ ಅರಿವು ಮನದಟ್ಟಾಗುತ್ತದೆ. ಏನು ಸಾಧಿಸಿದ್ದೇವೆ, ಇನ್ನೂ ಏನನ್ನು ಸಾಧಿಸಬಹುದಿತ್ತೆಂದು ನಾವು ಯೋಚಿಸಬೇಕು. ಕರ್ತವ್ಯ ನಿಷ್ಠೆಯಿಂದ ದುಡಿದಾಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆಂದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್ ಅವರು ಮಾತನಾಡಿ, ನಾವು ಸ್ವಾತಂತ್ರ್ಯದ ಹೋರಾಟಕ್ಕೆ ಹೋರಾಡಿದ ಮೊದಲ ಮಹಿಳಾ ಹೋರಾಟಗಾರ್ತಿ ರಾಣಿ ಅಬ್ಬಕ್ಕ, ಹಾಗೆಯೇ ಕಿತ್ತೂರು ರಾಣಿ ಚೆನ್ನಮ್ಮ, ವಿಜಯಲಕ್ಷ್ಮಿ ಪಂಡಿತ್ ಮೊದಲಾದವರನ್ನು ಮರೆಯಬಾರದು ಎಂದರು. ಇಂದಿನ ಯುವಕ-ಯುವತಿಯರು ಬಲಿಷ್ಠ ಭಾರತವನ್ನು ಕಟ್ಟುವ ಇಚ್ಛಾಶಕ್ತಿ ಬೆಳೆಸಬೇಕು. ನಿಜವಾದ ನಾಯಕತ್ವದಿಂದ ಇದು ಸಾಧ್ಯ ಎಂದರು.

ಒಲಿಂಪಿಯಾಡ್ ರಾಷ್ಟ್ರೀಯ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಾದ ತನ್ಮಯ್ ಮತ್ಥು ನಿಶಾಂತ್ ಬಹುಮಾನ ವಿತರಿಸಲಾಯಿತು. 

ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್.ನಾಯಕ್, ಉಪಪ್ರಾಂಶುಪಾಲೆ(ಆಡಳಿತ) ಧೃತಿ ವಿ ಹೆಗ್ಡೆ, 

ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ, ಕಾರ್ಯಕ್ರಮ ನಿರ್ದೇಶಕ  ಸುರೇಶ ಕೆ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಸ್ವಾಗತಿಸಿ, ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಅಮೀನ್ ವಂದಿಸಿದರು. ಅದಿತಿ ರಾವ್, ಧ್ಯಾನ್ ಆರ್, ಸೃಷ್ಟಿ ಕೆ. ದಂಡಿ, ಆಹಿಲ್ ಅಬಿದ್ ಅಹ್ಮದ್ ಕಾರ್ಯಕ್ರಮ ನಿರ್ವಹಿಸಿದರು. 

ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಮತ್ತು ಸಾಹಸ ಪ್ರದರ್ಶನ ನೃತ್ಯ ಕಾರ್ಯಕ್ರಮಗಳು ಗಮನಸೆಳೆಯಿತು. ಸಿಹಿತಿಂಡಿ ವಿತರಣೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article