ರಟ್ಟೆಯ ಬಲವೇ ಹಮಾಲಿ ಕಾರ್ಮಿಕರ ಆಸ್ತಿ: ಸುನಿಲ್ ಕುಮಾರ್ ಬಜಾಲ್
Thursday, August 21, 2025
ಮಂಗಳೂರು: ಹಳೆ ಬಂದರಿನ ಹಮಾಲಿ ಕಾರ್ಮಿಕರು ಅತ್ಯಂತ ಶ್ರಮ ಜೀವಿಗಳು ತನಗೆ ಖರೀದಿಸುವ ಸಾಮರ್ಥ್ಯ ಇರದಿದ್ದರೂ ಟನ್ ಗಟ್ಟಲೆ ಭಾರವನ್ನು ತಲೆ ಮೇಲೆ ಹೊತ್ತು ಮಂಗಳೂರಿನ ಆರ್ಥಿಕತೆಗೆ ಶಕ್ತಿ ತುಂಬಿದ್ದಾರೆ ರಟ್ಟೆಯ ಬಲವೇ ಕಾರ್ಮಿಕರ ಆಸ್ತಿ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಅವರು ಇಂದು ನಗರದ ನಾಸಿಕ್ ಬಂಗೇರ ಸಭಾಭವನದಲ್ಲಿ ಜರಗಿದ ಬಂದರು ಶ್ರಮಿಕರ ಸಂಘದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಕಾರ್ಮಿಕರು ಆಳುವ ವರ್ಗದ ಕಾಪೋರೇಟ್ ಹಿತಾಸಕ್ತಿಯ ಕಪಿಮುಷ್ಟಿಯಲ್ಲಿ ಸಿಲುಕಿ ಕೊಂಡಿದ್ದಾರೆ ದೇಶದಲ್ಲಿ ಕಾರ್ಮಿಕರಿಂದ ಐಕ್ಯ ಹೋರಾಟ ಕಟ್ಟಬೇಕಿದೆ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅವರು ಮಾತನಾಡಿ, ಬಂದರಿನ ಹಮಾಲಿ ಕಾರ್ಮಿಕರು ಎಪಿಎಂಸಿ ಕಾಯ್ದೆ ಅಡಿಯಲ್ಲಿ ಅನುಮತಿ ಪಡೆದ ವರ್ತಕರಲ್ಲಿ ದುಡಿಯುತ್ತಿದ್ದರೂ ಎಪಿಎಂಸಿ ಸೌಲಭ್ಯಗಳಿಂದ ಬಂದರಿನ ಹಮಾಲಿ ಕಾರ್ಮಿಕರು ವಂಚಿತರಾಗಿದ್ದಾರೆ ಎಪಿಎಂಸಿ ಯ 'ಬಿ' ಯಾರ್ಡ್ ಎಂದು ಘೋಷಣೆ ಆಗಿದ್ದರೂ ಕಾರ್ಮಿಕರಿಗೆ ನ್ಯಾಯ ಮರೀಚಿಕೆ ಆಗಿದೆ. ಕಾರ್ಮಿಕರ ಹಕ್ಕುಗಳನ್ನು ಉಳಿಸಲು ಹೋರಾಟವೊಂದೇ ದಾರಿ ಎಂದು ಹೇಳಿದರು.
ಸಂಘದ ಪ್ರಮುಖರಾದ ಹಂಝ ಜಪ್ಪಿನಮೊಗರು, ಲೋಕೇಶ್ ಶೆಟ್ಟಿ, ಹನೀಫ್ ಬೆಂಗ್ರೆ, ಮುಜಾಫರ್, ಮಜೀದ್ ಉಳ್ಳಾಲಬೈಲ್, ಅಬ್ದುಲ್ ಶಮೀರ್ ಬೋಳಿಯಾರ್, ಹರೀಶ್ ಕೆರೆಬೈಲ್,ಸಂದೇಶ್, ಮಾಧವ ಕಾವೂರು, ಮುನೀರ್, ಮೋಹನ್ ಕೊಲ್ಯ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಸ್ವಾಗತಿಸಿ, ಕೋಶಾಧಿಕಾರಿ ಫಾರೂಕ್ ಉಳ್ಳಾಲಬೈಲ್ ವಂದಿಸಿದರು.




