
ಗ್ರಂಥಾಲಯ ನಮಗೆ ಶಿಸ್ತು ಕಲಿಸುತ್ತದೆ: ಬಿ.ಎ. ಖಾದರ್ ಷಾ
Tuesday, August 12, 2025
ಮಂಗಳೂರು: ಗ್ರಂಥಾಲಯ ಎಂಬುವುದು ವಿಜ್ಞಾನ. ಅದು ಕಲೆಯಲ್ಲ. ಪ್ರತಿನಿತ್ಯ ನಾವು ಗ್ರಂಥಾಲಯಕ್ಕೆ ಹೋಗುವುದರಿಂದ ಶಿಸ್ತನ್ನು ಕಲಿಸುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಹೇಳಿದರು.
ಅವರು ಇಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಗ್ರಂಥಾಲಯ ಹಾಗೂ ಕನ್ನಡ ವಿಭಾಗದ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ಮುಕ್ತ ವಾಚನಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನದಲ್ಲಿ ಅಂತರ್ಜಾಲದ ಹಾವಳಿ ಹೆಚ್ಚಾಗಿದ್ದು, ಎಲ್ಲರೂ ಅದರತ್ತ ವಾಲಿದ್ದಾರೆ. ಅಂತರ್ಜಾಲದ ಹಾವಳಿ ಇಲ್ಲದ ಸಂದರ್ಭದಲ್ಲಿ ಎಲ್ಲರೂ ಹೆಚ್ಚಾಗಿ ಗ್ರಂಥಾಲಯವನ್ನು ಅವಲಂಬಿಸುತ್ತಿದ್ದುದರಿಂದ ನಮ್ಮ ಜ್ಞಾನ ಕೌಶಲ್ಯ ವೃದ್ಧಿಗೆ ಗ್ರಂಥಾಲಯ ಬಹಳ ಮುಖ್ಯ ಪಾತ್ರ ವಹಿಸುತ್ತಿತ್ತು. ನಾವು ಅತಿಯಾಗಿ ಪುಸ್ತಕವನ್ನು ಉಪಯೋಗಿಸಿಕೊಂಡಾಗ ನಮ್ಮ ಜ್ಞಾನ ಮತ್ತೊಂದು ಸ್ತರಕ್ಕೆ ಏರಲು ಸಾಧ್ಯ ಎಂದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಲೇಖಕ ಹಾಗೂ ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಕೆಲವರು ಆಕಾರ ಕೇಂದ್ರಿತ ಕಾಲೇಜು ಹಾಗೂ ಇನ್ನೂ ಕೆಲವರು ಬುದ್ದಿಕೇಂದ್ರಿತ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಾರೆ. ಆದರೆ ರಥಬೀದಿಯ ಈ ಕಾಲೇಜು ಆಕಾರ ಕೇಂದ್ರಿತ ಹಾಗೂ ಬುದ್ದಿಕೇಂದ್ರಿತ ಕಾಲೇಜು ಆಗಿ ಗುರುತಿಸಿಕೊಂಡಿರುವುದು ಬಹಳ ಸಂತೋಷದ ವಿಷಯ ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ಕೊರೊನೋತ್ತರ ಕಾಲದಲ್ಲಿ ನಾವುಗಳು ಬದುಕುತ್ತಿದ್ದೇವೆ. ಈ ನಾಲ್ಕು ವರ್ಷದ ತಿತ್ತೀಚಿನ ಯುವಜನತೆಯಲ್ಲಿ ಸಹನೆ, ತಾಳ್ಮೆ, ಸೂಕ್ಷ್ಮತೆಗಳು ನಾಶವಾಗುತ್ತಿದೆ. ಇದನ್ನು ಮರಳಿ ಪಡೆಯಲು ಓದಿನ ಅರಿವಿನ ಸೂಕ್ಷ್ಮತೆ ಇರಬೇಕು. ಇದರ ಪರಿಕಲ್ಪನೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ದೇವಾಲಯದ ಗರ್ಭಗುಡಿಯಲ್ಲಿ ಕನ್ನಡಿ ಇರಬೇಕು, ದೇವಾಲಯ ಒಳಗೆ ಗ್ರಂಥಾಲಯ, ಹೊರಗೆ ಉದ್ಯಾನವನ ಇರಬೇಕು ಈ ಕನ್ನಡಿ, ಗ್ರಂಥಾಲಯ ಹಾಗೂ ಪರಿಸರದ ಪರಿಕಲ್ಪನೆಯನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ನಮಗೆ ಜಗತ್ತನ್ನು ತೋರಿಸುವ ಮತ್ತೊಂದು ಜಗತ್ತು ಎಂದರೆ ಅದು ಗ್ರಂಥಾಲಯ. ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳು ಇವೆ, ಆದರೆ ಓದುವವರಿಲ್ಲ. ಅದನ್ನು ನಾವು ಓದಬೇಕು. ಇತ್ತೀಚಿನ ದಿನದಲ್ಲಿ ಜಗತ್ತನ್ನು ತೋರಿಸುವ ಪುಸ್ತಕಗಳು ನಾಪತ್ತೆಯಾಗುತ್ತಿವೆ. ಮುಂದಿನದಿನದಲ್ಲಿ ಪುಸ್ತಕಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನ ಗ್ರಂಥಪಾಲಕಿ ಡಾ. ವನಜಾ ಅವರು ಎಸ್.ಆರ್. ರಂಗನಾಥನ್ ಅವರ ಜೀವನದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಅವರು ಮಾತನಾಡಿ ಶುಭಹಾರೈಸಿದರು.
ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ, ಕಾಲೇಜಿನ ಗ್ರಂಥಪಾಲಕಿ ಕುಮಾರಿ ಉಮಾ ಎ.ಬಿ. ಉಪಸ್ಥಿತರಿದ್ದರು.
ರಿಶಿಕಾ ಪ್ರಾರ್ಥನೆ ನೆರವೇರಿಸಿದರು. ಸೃಷ್ಟಿ ಸ್ವಾಗತಿಸಿ, ಭೀಮವ್ವ ವಂದಿಸಿದರು. ರಾಜೇಶ್ವರಿ ನಿರೂಪಿದರು.