ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ತಂದೆಗೆ ಸಜೆ
ಮಂಗಳೂರು: ಮೂರುವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ತಂದೆಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಬಜ್ಜೆಯಲ್ಲಿ ವಾಸಿಸುತ್ತಿದ್ದ 4 ವರ್ಷದ ವ್ಯಕ್ತಿ ಶಿಕ್ಷೆಗೊಳಗಾದ ಅಪರಾಧಿ. 2024ರ ಡಿ.೧೮ರಂದು ಬೆಳಗ್ಗೆ 6 ಗಂಟೆಗೆ ಮಗುವಿನ ತಾಯಿ ಮಗುವನ್ನು ತನ್ನ ತಂಗಿಯ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 3.30ರ ವೇಳೆಗೆ ಆಕೆ ಮಗುವನ್ನು ಪಕ್ಕದ ಮತ್ತೊಂದು ಮನೆಯಲ್ಲಿ ಬಿಟ್ಟು ಶಾಲೆಗೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ತಂದೆ ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ್ದ.
ರಾತ್ರಿ ಮನೆಗೆ ಬಂದ ತಾಯಿ ಮಗುವಿನ ಗುಪ್ತಾಂಗದ ಮೇಲಾದ ಗಾಯ ನೋಡಿ ಮಗುವಿನ ಬಳಿ ಕೇಳಿದಾಗ ಮಗು ನಡೆದ ವಿಷಯ ತಿಳಿಸಿತ್ತು. ಮರುದಿನ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್ಸ್‌ಪೆಕ್ಟರ್ ಸಂದೀಪ್ ಆರೋಪಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.
ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಮನು ಅಪರಾಧಿಗೆ ಪೋಕ್ಸೋ ಕಲಂ 10ರಡಿ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ನೊಂದ ಬಾಲಕಿಗೆ ಪರಿಹಾರವಾಗಿ ದಂಡದ 20 ಸಾವಿರ ರೂ. ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 30 ಸಾವಿರ ರೂ. ಪರಿಹಾರ ಮೊತ್ತ ಸೇರಿ ಒಟ್ಟು 50 ಸಾವಿರ ರೂ. ಪಾವತಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.