ಕರ್ನಾಟಕದಲ್ಲಿ ಪರಿಶಿಷ್ಟ ವಿರೋಧಿ ಕಾಂಗ್ರೆಸ್ ಸರಕಾರ: ಸತೀಶ್ ಕುಂಪಲ

ಕರ್ನಾಟಕದಲ್ಲಿ ಪರಿಶಿಷ್ಟ ವಿರೋಧಿ ಕಾಂಗ್ರೆಸ್ ಸರಕಾರ: ಸತೀಶ್ ಕುಂಪಲ

ಮಂಗಳೂರು: ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ಮೇಲೆ ಆರೋಪಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಹಾದಿ ಬೀದಿಯಲ್ಲಿ ರಂಪಾಟ ಮಾಡುವ ಬದಲು ದಾಖಲೆಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ರಾಹುಲ್ ಗಾಂಧಿಗೆ ಸ್ಪಷ್ಟವಾಗಿ ಸೂಚಿಸಿದೆ.

ಈಗಾಗಲೇ ಮಾಜಿ ಕಾಂಗ್ರೆಸಿಗರಾದ ಸಿ.ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಬಾದಾಮಿಯಲ್ಲಿ 3000 ಮತಗಳನ್ನು ಖರೀದಿಸಿ ಗೆದ್ದಿದ್ದಾರೆ ಎಂದು ಹೇಳಿದರೆ ರಾಜ್ಯದ ಸಚಿವ ಕೆ.ಎನ್. ರಾಜಣ್ಣ ಅವರು ಮತಗಳ್ಳತನದ ಬಗ್ಗೆ ಹೇಳುತ್ತಾ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಲೇ ಮತದಾರರ ಪಟ್ಟಿ ಸಿದ್ದವಾಗಿರುವುದು, ಅದರಲ್ಲಿ ನಮ್ಮದೂ ಪಾತ್ರ ಇದೆ ಎಂದು ಸತ್ಯ ನುಡಿದಿದ್ದಾರೆ ಅಷ್ಟರಲ್ಲೇ ಅವರು ಮಾಜಿ ಸಚಿವರಾಗಿದ್ದಾರೆ, ಇದು ಸತ್ಯ ನುಡಿದರೆ ಕಾಂಗ್ರೆಸ್‌ನಲ್ಲಿ ದೊರೆಯುವ ಉಡುಗೊರೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಇಟ್ಟಿದ್ದ 11,500 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿರುವುದಾದರೆ ಇನ್ನೊಂದೆಡೆ ವಾಲ್ಮೀಕಿ ಹಗರಣದಿಂದ ಪರಿಶಿಷ್ಟ ವರ್ಗ ಮಂತ್ರಿಯೋರ್ವರು ರಾಜೀನಾಮೆ ನೀಡಿದರು. ಇದೀಗ ರಾಹುಲ್ ಗಾಂಧಿಯ ಚುನಾವಣಾ ಆಯೋಗ ಅರೋಪ ಸರಿಯಿಲ್ಲ ಎಂದ ತಕ್ಷಣ ಇನ್ನೊಬ್ಬ ಪರಿಶಿಷ್ಟ ಜಾತಿಯ ಮಂತ್ರಿಯಾದ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಿದರು. 

ಇನ್ನೊಂದೆಡೆ ಪರಿಶಿಷ್ಟ ವರ್ಗದ ಮತ್ತು ಬಿಜೆಪಿಯ ಪ್ರಬಲ ನಾಯಕರಾದ ಅರವಿಂದ ಲಿಂಬಾವಳಿ ಕ್ಷೇತ್ರವಾಗಿರುವ ಮಹಾದೇವಪುರ ಕ್ಷೇತ್ರದ ಮೇಲೆ ಆರೋಪ ಮಾಡುವ ಕಾಂಗ್ರೆಸ್ಸಿಗರ ಮಾನಸಿಕತೆ ಪರಿಶಿಷ್ಟ ವಿರೋಧಿಯಾಗಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆದ್ದಾಗ ಸರಿಯಿದ್ದ ಇ.ವಿ.ಎಂ. ಮಹಾರಾಷ್ಟ್ರದಲ್ಲಿ ಸೋತಾಗ ಹ್ಯಾಕ್ ಆಗಿರುತ್ತದೆ. ಹಿಂದೆ ಕಾಂಗ್ರೆಸ್ ಸೋತ ಸಂದರ್ಭದಲ್ಲಿ ಇ.ವಿ.ಎಂ ಬಗ್ಗೆ ದೂರುತ್ತಿದ್ದವರು ಈಗ ಆಯೋಗವನ್ನೇ ದೂರಲು ಪ್ರಾರಂಭಿಸಿದ್ದಾರೆ. ಇಂಡಿ ಒಕ್ಕೂಟ ಮಿತ್ರಪಕ್ಷದ ಉಮರ್ ಅಬ್ದುಲ್ ಅವರೇ ಕಾಂಗ್ರೆಸ್‌ನ ದ್ವಿಮುಖ ನೀತಿಯನ್ನು ವಿರೋಧಿಸಿದ್ದರು ಎನ್ನುವುದನ್ನು ನೆನಪಿಸಲಿ. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯವನ್ನಾಗಿಸುವ ಮಹಾನ್ ಕಲೆ ರಾಹುಲ್ ಗಾಂಧಿಗೆ ಸಿದ್ದಿಸಿದೆ ಆದರೆ ಅವರ ನಾಟಕದ ಅಂಕದ ಪರದೆಯನ್ನು ಕಾಂಗ್ರೆಸಿಗರೇ ಬಯಲುಗೊಳಿಸಿದ್ದಾರೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article