ಮಗುವಿನ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ಸಾಬೀತು

ಮಗುವಿನ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ಸಾಬೀತು

ಮಂಗಳೂರು: ತಂದೆಯೇ ಮೂರೂವರೆ ವರ್ಷದ ಮಗುವಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪವು ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯವು ಇನ್ನಷ್ಟೇ ಪ್ರಕಟಿಸಬೇಕಿದೆ.

ರಾಣಿಬೆನ್ನೂರು ಬೈಲೂರಿನಿಂದ ಬಂದು ಬಜಪೆಯಲ್ಲಿ ನೆಲೆಸಿದ್ದ 34 ವರ್ಷದ ವ್ಯಕ್ತಿ ಈ ಕೃತ್ಯವೆಸಗಿದ ಅಪರಾಧಿ. 2024ರ ಡಿ.18ರಂದು ಬೆಳಿಗ್ಗೆ 6 ಗಂಟೆಗೆ ಮಗುವಿನ ತಾಯಿ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭ ಮಗುವನ್ನು ತಂಗಿಯ ಮನೆಯಲ್ಲಿ ಬಿಟ್ಟು ಹೋಗಿದ್ದರು. ಮಹಿಳೆಯ ತಂಗಿ ತನ್ನ ಮಗುವನ್ನು ಶಾಲೆಯಿಂದ ಕರೆತರಲು ಮಧ್ಯಾಹ್ನ 3.30ರ ವೇಳೆಗೆ ಹೊರಗೆ ಹೋಗಿದ್ದು, ಆಗ ಅಕ್ಕನ ಮಗುವನ್ನು ಮತ್ತೊಂದು ಮನೆಯಲ್ಲಿ ಬಿಟ್ಟಿದ್ದರು. ಮಗುವಿನ ತಂದೆ ಆ ಮನೆಯಿಂದ ಮಗುವನ್ನು ಮನೆಗೆ ಕರೆದೊಯ್ದು ದೌರ್ಜನ್ಯವೆಸಗಿದ್ದ.

ರಾತ್ರಿ ಮನೆಗೆ ಮರಳಿದ ತಾಯಿ, ಮಗುವಿನ ಗುಪ್ತಾಂಗದಲ್ಲಿ ಗಾಯವಿರುವುದನ್ನು ನೋಡಿ ಈ ಬಗ್ಗೆ ವಿಚಾರಿಸಿದಾಗ ಮಗು ನಡೆದ ವಿಷಯವನ್ನು ತಿಳಿಸಿತ್ತು. ಮರುದಿನ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಕೃತ್ಯ ಬಯಲಾಗಿತ್ತು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್‌ಸ್ಪೆಕ್ಟರ್ ಸಂದೀಪ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (ತ್ವರಿತಗತಿ ವಿಶೇಷ ನ್ಯಾಯಾಲಯ-2) ನ್ಯಾಯಾಧೀಶರಾದ ಕೆ.ಎಸ್. ಮಾನು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ‘ಮಗುವಿನ ತಂದೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್ 10 ಮತ್ತು 12ರ ರಡಿ ಅಪರಾಧವೆಸಗಿದ್ದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯವು ಆ.28ರಂದು ಪ್ರಕಟಿಸುವ ನಿರೀಕ್ಷೆ ಇದೆ’ ಎಂದು ವಕೀಲರು ಮಾಹಿತಿ ನೀಡಿದ್ದಾರೆ.

ಸರ್ಕಾರದ ಪರವಾಗಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article