ಪಿಂಚಣಿ ಮತ್ತು ಗ್ರಾಚ್ಯುಟಿಯ ಹೊರೆಯನ್ನು ವಿದ್ಯುತ್ ಗ್ರಾಹಕರ ಮೇಲೆ ಹಾಕಿದ್ದು ಹಿಂದಿನ ಬಿಜೆಪಿ ಸರ್ಕಾರ: ಜೆ.ಆರ್. ಲೋಬೊ

ಪಿಂಚಣಿ ಮತ್ತು ಗ್ರಾಚ್ಯುಟಿಯ ಹೊರೆಯನ್ನು ವಿದ್ಯುತ್ ಗ್ರಾಹಕರ ಮೇಲೆ ಹಾಕಿದ್ದು ಹಿಂದಿನ ಬಿಜೆಪಿ ಸರ್ಕಾರ: ಜೆ.ಆರ್. ಲೋಬೊ


ಮಂಗಳೂರು: ಕೆಪಿಟಿಸಿಎಲ್‌ನ 39 ಸಾವಿರ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಪಿಂಚಣಿ ಮತ್ತು ಗ್ರಾಚ್ಯುಟಿಯ ಹೊರೆಯನ್ನು ವಿದ್ಯುತ್ ಗ್ರಾಹಕರ ಮೇಲೆ ಹಾಕಿದ್ದು ಹಿಂದಿನ ಬಿಜೆಪಿ ಸರ್ಕಾರ. ಬಿಜೆಪಿ ಸರ್ಕಾರ 2022ರಲ್ಲಿ ಅಧಿಕೃತವಾಗಿ ಹೊರಡಿಸಿದ ಆದೇಶವನ್ನು ಕೆಇಆರ್‌ಸಿ ಈಗ ಜಾರಿಗೊಳಿಸಿದೆ. ಗೃಹ ಬಳಕೆ ವಿದ್ಯುತ್ ಬಿಲ್ ಹೆಚ್ಚಳದ ಸಂಪೂರ್ಣ ಹೊಣೆಯನ್ನು ಬಿಜೆಪಿ ಹೊರಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹಾಗೂ ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು.

ವಿದ್ಯುತ್ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದರು.

ಜೆ.ಆರ್. ಲೋಬೊ ಮಾತನಾಡಿ, ಕೆಪಿಟಿಸಿಎಲ್‌ನ ಅರ್ಹ 39 ಸಾವಿರ ನೌಕರರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಪ್ರತ್ಯೇಕ ಟ್ರಸ್ಟ್ ಇದೆ. ಪಿಂಚಣಿ ಮತ್ತು ಗ್ರಾಚ್ಯುಟಿ ಮೊತ್ತವನ್ನು ಸರ್ಕಾರ ಈ ಟ್ರಸ್ಟ್‌ಗೆ ಜಮಾ ಮಾಡುತ್ತಿತ್ತು. 2021ರವರೆಗೆ ಸರ್ಕಾರ 12,700 ಕೋಟಿ ರು.ಗಳನ್ನು ಟ್ರಸ್ಟ್‌ಗೆ ಜಮಾ ಮಾಡಿದೆ. ಆದರೆ ‘ಸರ್ಕಾರ ಈ ಹಣ ಕೊಡಲಾಗದು, ಗ್ರಾಹಕರಿಂದಲೇ ಈ ಹಣ ಸಂಗ್ರಹಿಸಬೇಕು’ ಎಂದು 2022ರ ನ.15 ಮತ್ತು ನ.22ರಂದು ಆಗಿನ ಬಿಜೆಪಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಅಲ್ಲದೆ 2022, 2023ನೇ ಸಾಲಿನ ಕೆಪಿಟಿಸಿಎಲ್ ನೌಕರರ ಅರಿಯರ್ಸ್‌ನ್ನೂ ಗ್ರಾಹಕರಿಂದಲೇ ಸಂಗ್ರಹಿಸಬೇಕು ಎಂದೂ ಪ್ರತ್ಯೇಕ ಆದೇಶ ಮಾಡಿತ್ತು. ಇದರ ವಿರುದ್ಧ ವಿದ್ಯುತ್ ಬಳಕೆದಾರರು ಹೈಕೋರ್ಟ್‌ಗೆ ದಾವೆ ಸಲ್ಲಿಸಿದ್ದು, ಸರ್ಕಾರದ ಆದೇಶದಂತೆ ಮುಂದುವರಿಸುವಂತೆ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ ಕೆಇಆರ್‌ಸಿ ಪ್ರತಿ ಯೂನಿಟ್ ವಿದ್ಯುತ್‌ಗೆ 36 ಪೈಸೆ ಹೆಚ್ಚಳ ಮಾಡಿ ಆದೇಶಿಸಿದೆ. ಇಷ್ಟೆಲ್ಲ ವಿಚಾರ ಸರ್ಕಾರದ ಅಧಿಕೃತ ದಾಖಲೆಯಲ್ಲೇ ಇರುವಾಗ ಬಿಜೆಪಿಯವರು ವಿದ್ಯುತ್ ದರ ಏರಿಕೆಗೆ ಕಾಂಗ್ರೆಸ್ ಕಾರಣ ಎಂದು ಸುಳ್ಳು ಹೇಳುತ್ತಿದ್ದಾರೆ. ಈಗ ಪ್ರತಿಭಟನೆ ಯಾರ ವಿರುದ್ಧ ಮಾಡಬೇಕಾಗಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಮಾಡಿದ ತಪ್ಪು ಆದೇಶದಿಂದ ಗ್ರಾಹಕರ ಮೇಲೆ ಹೊರೆ ಬಿದ್ದಿದೆ. ಈಗ ಶಾಸಕರಾಗಿರುವವರು ಆಗಲೂ ಶಾಸಕರಾಗಿದ್ದರು. ಆದೇಶ ಹೊರಡಿಸಿದಾಗ ಏಕೆ ವಿರೋಧ ಮಾಡಲಿಲ್ಲ ಎಂದು ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್., ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಜಯಶೀಲ ಅಡ್ಯಂತಾಯ, ಪ್ರೇಮನಾಥ್, ಯೋಗೇಶ್ ಕುಮಾರ್, ನೆಲ್ಸನ್ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article