
ಫುಟ್ಬಾಲ್ ಕ್ರೀಡಾಂಗಣಕ್ಕೆ ಪೂರಕ ಸೌಲಭ್ಯಕ್ಕೆ 75 ಲಕ್ಷ: ಶಾಸಕ ಕಾಮತ್
ಅವರು ಸೋಮವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುತ್ತಿರುವ ಶಾಲಾ-ಕಾಲೇಜು ಮಟ್ಟದ 27ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟವನ್ನು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಉದ್ಘಾಟಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈಗಾಗಲೇ ಫುಟ್ಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕ್ರೀಡಾಪಟುಗಳ ಬಳಕೆಗೆ ಲಭ್ಯವಾಗಲಿದೆ. ಕ್ರೀಡಾಂಗಣಕ್ಕೆ ಪೆವಿಲಿಯನ್, ಶೌಚಾಲಯ ಸೇರಿದಂತೆ ಇನ್ನಿತರ ಪೂರಕ ಸೌಲಭ್ಯಗಳನ್ನು ಒದಗಿಸಲು ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದು, ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದುಹೇಳಿದರು.
ಮಂಗಳೂರಿನ ಫುಟ್ಬಾಲ್ ಪ್ರಿಯರ ಬಹುಕಾಲದ ಕನಸಾಗಿದ್ದ ಟರ್ಫ್ ಕೋರ್ಟ್ ನಿರ್ಮಾಣ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದ ಸೌಲಭ್ಯ ಕ್ರೀಡಾಪಟುಗಳಿಗೆ ದೊರಕಲಿದೆ ಎಂದು ಅವರು ಹೇಳಿದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ್, ಅನಿವಾಸಿ ಉದ್ಯಮಿ ಝಕರಿಯಾ ಬಜ್ಪೆ ಮಾತನಾಡಿದರು. ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಪ್ರದೀಪ್ ಡಿಸೋಜಾ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ, ಮಾಜಿ ಕಾಪೆರ್ರೇಟರ್ ಅಬ್ದುಲ್ ಲತೀಫ್, ಹಿರಿಯ ಫುಟ್ಬಾಲ್ ಆಟಗಾರ ಲಕ್ಷ್ಮಣ್ ಬೆಂಗ್ರೆ, ಫುಟ್ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಡಿ.ಎಂ ಅಸ್ಲಂ ಸ್ವಾಗತಿಸಿದರು.
ಇಂದಿನಿಂದ ಆರಂಭವಾದ ಇಂಡಿಪೆಂಡೆನ್ಸ್ ಡೇ ಫುಟ್ಬಾಲ್ ಪಂದ್ಯಾಟವು ಕರಾವಳಿ ಉತ್ಸವ ಮೈದಾನ, ಫಳ್ನೀರ್ ಎಫ್ಸಿ ಮೈದಾನ ಮತ್ತು ದೇರಳಕಟ್ಟೆ ಯೆನಪೊಯ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ಆ.15 ರವರೆಗೆ ನಡೆಯಲಿದೆ.