ಪೊಲೀಸ್ ಇಲಾಖೆಯನ್ನು ಮುಂದಿಟ್ಟು ಹಿಂದೂ ಹಬ್ಬಗಳ ಆಚರಣೆಗೆ ಅಡ್ಡಿ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಹಬ್ಬಗಳ ಆಚರಣೆಗೆ ಮನಸೋ-ಇಚ್ಛೆ ನಿಯಮಗಳನ್ನು ಹೇರಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ದ. ಕ. ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸೇರಿದಂತೆ ಹಲವು ಹಬ್ಬದ ಆಚರಣೆ ಸಂದರ್ಭ ಧ್ವನಿವರ್ಧಕ ಬಳಸುವುದಕ್ಕೆ ಪೊಲೀಸರು ಅವಕಾಶ ನೀಡದೆ ಷರತ್ತುಗಳನ್ನು ವಿಧಿಸಿ ತೊಂದರೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ತುಳುನಾಡು ದೈವಾರಾಧನೆ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಮುಂತಾದ ಶ್ರೀಮಂತ ಆಚರಣೆಗೆ ಹೆಸರುವಾಸಿಯಾಗಿದೆ. ಕೋಲ, ನೇಮ, ಯಕ್ಷಗಾನ, ಬ್ರಹ್ಮಕಲಶದಂಥ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಆದರೆ, ಪೊಲೀಸರು ಇತ್ತೀಚೆಗೆ ಹಲವೆಡೆ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆ ಮಾಡಿರುವುದಕ್ಕೆ ಆಯೋಜಕರು ಹಾಗೂ ಸೌಂಡ್ ಸಿಸ್ಟಮ್ನವರ ಮೇಲೆ ಪ್ರಕರಣ ದಾಖಲಿಸಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಬ್ಬ-ಹರಿದಿನಗಳನ್ನು ಸಂತೋಷ, ಭಕ್ತಿ-ಭಾವದಿಂದ ಆಚರಿಸುತ್ತಿರಬೇಕಾದರೆ, ಪೊಲೀಸರಿಗೆ ಈ ರೀತಿ ಏಕಾಏಕಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯ ನಿಯಮಗಳನ್ನು ರೂಪಿಸುವುದಕ್ಕೆ ನಿರ್ದೇಶನಗಳನ್ನು ಕೊಟ್ಟವರು ಯಾರು? ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಧ್ವನಿವರ್ಧಕ ಬಳಕೆಗೆ ಕೆಲವೊಂದು ಷರತ್ತುಗಳು ಇದ್ದರೂ ಹಬ್ಬಗಳ ಆಚರಣೆಗೆ ಪೊಲೀಸರು ಯಾವುದೇ ಅಡ್ಡಿ ಮಾಡುತ್ತಿರಲಿಲ್ಲ. ಹಾಗಾದರೆ, ಸಿದ್ದರಾಮಯ್ಯ ಸರ್ಕಾರವೇ ಹಿಂದೂಗಳ ಧಾರ್ಮಿಕ ಆಚರಣೆಗೆ ಪೊಲೀಸರ ಮೂಲಕ ಈ ರೀತಿಯ ನಿಯಮಗಳನ್ನು ತಂದು ಜನರಿಗೆ ತೊಂದರೆ ಮಾಡುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ ಎಂದು ಆರೋಪಿಸಿದ್ದಾರೆ.