ಧ್ವನಿವರ್ಧಕ ನಿಷೇಧ: ಹಿಂದು ಧಾರ್ಮಿಕ ಸಂಪ್ರದಾಯವನ್ನು ಮೊಟಕುಗೊಳಿಸುವ ಹುನ್ನಾರ
ಮಂಗಳೂರು: ಕಾನೂನಿನ ನೆಪವೊಡ್ಡಿ ಪೊಲೀಸ್ ಇಲಾಖೆಯು ಹಿಂದು ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಧ್ವನಿವರ್ಧಕವನ್ನು ರಾತ್ರಿ 10 ಗಂಟೆ ಬಳಿಕ ಬಳಸಲು ಅವಕಾಶ ನೀಡದೆ ಇರುವ ಕ್ರಮವು ಖಂಡನೀಯ ಮತ್ತು ಅತಿರೇಕದ ಹಿಂದು ವಿರೋಧಿ ನಡೆಯಾಗಿದೆ ಎಂದು ಬಿಜೆಪಿ ದ. ಕ. ಜಿಲ್ಲಾಧಕ್ಷ ಸತೀಶ್ ಕುಂಪಲ ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ಧರ್ಮದ ಹಬ್ಬಗಳಾದ ಮೊಸರುಕುಡಿಕೆ, ಗಣೇಶೋತ್ಸವ, ನವರಾತ್ರಿ, ದಸರಾ, ದೀಪಾವಳಿ, ಶಿವರಾತ್ರಿ,ಗಳನ್ನು ಆಚರಣೆ ಮಾಡುವುದೇ ರಾತ್ರಿ ಹೊತ್ತಿನಲ್ಲಿ, ಜತೆಗೆ ತುಳುನಾಡಿನಲ್ಲಿ ಕೋಲ,,ನೇಮ, ಯಕ್ಷಗಾನ, ನಾಗಮಂಡಲಗಳು ನಡೆಯುವುದು ರಾತ್ರಿಯಲ್ಲಿ, ಇವುಗಳಿಗೆ ತನ್ನದೇ ಆಗಿರುವ ಕಟ್ಟುಪಾಡುಗಳು, ಪದ್ಧತಿಗಳಿವೆ. ಕಾನೂನಿನ ಹೆಸರಲ್ಲಿ ಅವುಗಳನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವುದು ನಮ್ಮ ಸಂಪ್ರದಾಯ, ಪರಂಪರೆಗಳನ್ನು ಛಿದ್ರಗೊಳಿಸುವ ಹುನ್ನಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ವಿಚಾರಕ್ಕೆ ಬಂದರೆ ಪೊಲೀಸ್ ಇಲಾಖೆಗೆ, ವಿಚಾರವಾದಿಗಳಿಗೆ, ಬುದ್ದಿಜೀವಿಗಳಿಗೆ ಹಿಂದು ಹಬ್ಬಗಳೇ ಕಾಣುವುದು. ಗಣೇಶೋತ್ಸವ ಬಂದರೆ ನೀರು ಕಲುಷಿತವಾಗುತ್ತದೆ, ದೀಪಾವಳಿ ಬಂದಾಗ ಪರಿಸರ ಮಾಲಿನ್ಯವಾಗುತ್ತದೆ. ಈಗ ರಾತ್ರಿಹೊತ್ತು ಧ್ವನಿವರ್ಧಕ ವನ್ನು ನಿಷೇದಿಸುವ ಮೂಲಕ ಪದೇಪದೇ ಹಿಂದು ವಿರೋದಿ ಮನೋಭಾವನೆಯನ್ನು ತೋರಿಸುತ್ತಿದ್ದಾರೆ. ನಾನೂ ಹಿಂದು,ನನ್ನ ಹೆಸರಲ್ಲೇ ದೇವರ ಹೆಸರಿದೆ ಎಂದು ಹೇಳುವ ಸಿದ್ದರಾಮಯ್ಯ, ಪರಮೇಶ್ವರ ರವರು, ಕೋಲ,ನೇಮಗಳಿಗೆ ಭೇಟಿ ನೀಡುವ ಸ್ಪೀಕರ್ ಖಾದರ್ ರವರಿಗೆ ಇಲ್ಲಿ ಆಗುತ್ತಿರುವ ತಾರತಮ್ಯ ದೋರಣೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.