
ಮತ್ತೆ ಮುನ್ನೆಲೆಗೆ ಬಂದ ಪದ್ಮಲತಾ ಪ್ರಕರಣ: ಎಸ್‌ಐಟಿಗೆ ದೂರು
ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗಲೇ 39 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೊಲೆಯಾಗಿದ್ದಾಳೆ ಎನ್ನಲಾಗಿರುವ ಪದ್ಮಲತಾ ಪ್ರಕರಣ ಮುನ್ನೆಲೆಗೆ ಬಂದಿದೆ.
ಆಗ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಪದ್ಮಲತಾ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಪದ್ಮಲತಾ ಉಜಿರೆ ಎಸ್‌ಡಿಎಂ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದಳು. 1986ರ ಡಿ.12ರಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಬಸ್ಸಿನಲ್ಲಿ ಬಂದಿದ್ದವಳು ಕಾಣೆಯಾಗಿದ್ದಳು. ಆನಂತರ, ಎರಡು ತಿಂಗಳ ನಂತರ 1987ರ ಫೆ.17ರಂದು ನೆರಿಯಾ ಹೊಳೆಯ ಬದಿಯಲ್ಲಿ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶಾಲು ಮತ್ತು ಕೈಗೆ ಕಟ್ಟಿದ ವಾಚ್ ಆಧಾರದಲ್ಲಿ ಶವವನ್ನು ಗುರುತಿಸಲಾಗಿತ್ತು.
ನ್ಯಾಯ ಸಿಗಲಿಲ್ಲ..:
‘ನನ್ನ ತಂದೆ ದೇವಾನಂದರು ಆಗ ಕಮ್ಯುನಿಸ್ಟ್ ಪಕ್ಷದಲ್ಲಿ ಸಕ್ರಿಯವಾಗಿದ್ದರು. ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದಲ್ಲದೆ ಅಸಹಜ ಸಾವಿಗೆ ಕಾರಣರಾದ ಆರೋಪಿಗಳ ಬಂಧನಕ್ಕಾಗಿ ಪಕ್ಷದ ಮೂಲಕ ಹೋರಾಟ ನಡೆಸಿದ್ದರು. ಬಳಿಕ ರಾಜ್ಯ ಸರಕಾರ ಸಿಐಡಿ ತಂಡದಿಂದ ತನಿಖೆ ನಡೆಸಿತ್ತು. ಆಗ ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದ್ದಲ್ಲದೆ, ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದ ರಾಚಯ್ಯ ಅವರು ನಮ್ಮ ಬೋಳಿಯಾರಿನಲ್ಲಿದ್ದ ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಸಿಐಡಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸದೆ ಪತ್ತೆಯಾಗದ ಪ್ರಕರಣ ಎಂದು ಹಿಂಬರಹ ನೀಡಿದ್ದರು ಎಂದು ಪದ್ಮಲತಾ ಸಹೋದರಿ ಇಂದ್ರಾವತಿ ಹೇಳಿದ್ದಾರೆ.
ಎಸ್‌ಐಟಿಗೆ ದೂರು..
ಇಂದು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಸಿಪಿಐಎಂ ನಾಯಕರೊಂದಿಗೆ ಆಗಮಿಸಿದ ಪದ್ಮಲತಾ ಸಹೋದರಿ ಇಂದ್ರಾವತಿ ಪದ್ಮಲತಾ ಪ್ರಕರಣದ ಮರು ತನಿಖೆಗಾಗಿ ಲಿಖಿತ ದೂರು ನೀಡಿ, ನನ್ನ ತಂಗಿಯನ್ನು ಯೋಜಿತ ರೀತಿಯಲ್ಲಿ ಅಪಹರಿಸಿ ಅತ್ಯಾಚಾರ, ಕೊಲೆ ನಡೆಸಿದ್ದಾರೆಂಬ ಅನುಮಾನಗಳಿದ್ದ ಕಾರಣ ಮುಂದೆಯಾದರೂ ತನಿಖೆ ನಡೆಸಿ ನ್ಯಾಯ ಪಡೆಯಬೇಕೆಂದು ಆಕೆಯ ಶವವನ್ನು ಸುಡದೆ ಹೂಳಲಾಗಿತ್ತು. ಅದನ್ನು ಹೊರ ತೆಗೆದು ತನಿಖೆ ನಡೆಸಿದರೆ ಕೊಲೆಯಾದ ಬಗ್ಗೆ ಖಚಿತತೆ ಸಿಗಲಿದ್ದು, ನನಗೆ ತಿಳಿದ ಸಾಕ್ಷಿ ನುಡಿಯಲು ಸಿದ್ಧಳಿದ್ದೇನೆ. ಪ್ರಕರಣದ ಮರು ತನಿಖೆ ಮಾಡಬೇಕೆಂದು ಎಸ್‌ಐಟಿ ತಂಡದ ಮುಂದೆ ಕೇಳಿಕೊಂಡಿದ್ದೇನೆ ಎಂದವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಎಸ್‌ಐಟಿ ತನಿಖೆ ನಡೆಸಿದರೆ ಪದ್ಮಲತಾ ಸಾವಿನ ಪ್ರಕರಣದ ಆರೋಪಿಗಳನ್ನು ಕಾನೂನಿನ ಮುಂದೆ ತರಬಹುದು ಎಂಬ ವಿಶ್ವಾಸವಿದೆ. ನಮ್ಮ ಬಳಿ ಇರುವ ಸಾಕ್ಷ್ಯಗಳು ಹಾಗೂ ಮಾಹಿತಿಗಳನ್ನು ತನಿಖಾ ತಂಡಕ್ಕೆ ನೀಡುತ್ತೇವೆ. ಪದ್ಮಲತಾಳ ಕೊಲೆಯಾಗಿ 39 ವರ್ಷಗಳು ಕಳೆದಿವೆ. ಈ ಬಗ್ಗೆ ತನಿಖೆ ಮಾಡಿದರೆ ಈಗಲೂ ಸತ್ಯ ಹೊರಬರುವ ನಿರೀಕ್ಷೆಯಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.