ಕದ್ರಿ ದೇವಸ್ಥಾನದಲ್ಲಿ ‘ಡಾಕ್ಟ್ರಾ -ಭಟ್ರಾ?’ ತುಳು ಸಿನೆಮಾದ ಮುಹೂರ್ತ
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕರಾದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಎಂ.ಎನ್.ಆರ್.ಪ್ರೊಡಕ್ಷನ್ ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೀಗ ಎರಡನೇ ಸಿನಿಮಾವನ್ನು ತುಳು ಭಾಷೆಯಲ್ಲಿ ನಿರ್ಮಿಸಲುಉತ್ಸುಕವಾಗಿದೆ. ತುಳು ರಂಗಭೂಮಿಯ ಕ್ರಿಯಾಶೀಲ ಹಾಗೂ ವಿಭಿನ್ನಯೋಚನೆಯ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ‘ಡಾಕ್ಟ್ರಾ-ಭಟ್ರಾ?’ ತುಳು ಸಿನಿಮಾ ನಿರ್ಮಾಣವಾಗಲಿದೆ ಎಂದರು. ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರು ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯ ಬ್ಯಾನರ್‌ನ ಚಿತ್ರವನ್ನು ನಿರ್ದೇಶಿಸುವುದು ನಮಗೆ ಹೆಮ್ಮೆಯ ವಿಚಾರ. ಇದೊಂದು ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ವಿಜ್ಞಾನ ಮತ್ತು ಆಚಾರ-ವಿಚಾರಗಳ ಸಂಘರ್ಷದಲ್ಲಿ ಕಥೆ ಹೆಣೆಯಲ್ಪಟ್ಟಿದೆ. ಉತ್ತಮ ಸಂದೇಶದೊಂದಿಗೆ ಸಂಪೂರ್ಣ ಮನೋರಂಜನಾತ್ಮಕ ಚಿತ್ರ ಇದಾಗಿದ್ದು, ತುಳು ಚಿತ್ರರಂಗ ಮತ್ತು ತುಳು ರಂಗಭೂಮಿಯ ಜನಪ್ರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತದ ಸಾರಥ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಕದ್ರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ, ಚಿತ್ರದ ನಿರ್ಮಾಪಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ನಿರ್ಮಾಣ ಸಂಸ್ಥೆಯ ಪ್ರೇಂ ಶೆಟ್ಟಿಸುರತ್ಕಲ್, ಉದ್ಯಮಿ ಜಯಪ್ರಕಾಶ್ ತುಂಬೆ ಉಪಸ್ಥಿತರಿದ್ದರು.
ಮುಹೂರ್ತ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ನಟರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿಬೆಳಪು, ಸದಾಶಿವ ಉಳ್ಳಾಲ್, ಶಶಿಕುಮಾರ್ ರೈ ಬಾಲ್ಯೊಟ್ಟು, ಮೇಘರಾಜ್, ಪುಷ್ಪರಾಜ್ ಜೈನ್, ಪ್ರಕಾಶ್ ಪಾಂಡೇಶ್ವರ ಭಾಗವಹಿಸಿದ್ದರು.
ಈ ಚಲನಚಿತ್ರದ ನಿರ್ಮಾಣ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರೇಂಶೆಟ್ಟಿಫಿಲ್ಮ್‌ನ ಪ್ರೇಂ ಶೆಟ್ಟಿಸುರತ್ಕಲ್ ಮತ್ತು ಉದ್ಯಮಿ ಜಯಪ್ರಕಾಶ್ ತುಂಬೆ ಅವರು ವಹಿಸಲಿದ್ದಾರೆ. ತುಳು ಭಾಷೆಗೆ ನಮ್ಮಿಂದ ಏನಾದರೂ ಕೊಡುಗೆ ನೀಡುವ ಸದುದ್ದೇಶದಿಂದ ಈ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರ ಹಾಸ್ಯಮಯವಾಗಿದ್ದು, ಕುಟುಂಬ ಸಮೇತರಾಗಿ ವೀಕ್ಷಿಸುವ ಚಿತ್ರವಾಗಿ ಮೂಡಿಬರಲಿದೆ. ತುಳುನಾಡಿನ ಸಮಸ್ತ ಜನತೆ ಪ್ರೋತ್ಸಾಹ ನೀಡಬೇಕು. ಹೆಚ್ಚಿನ ಪ್ರೋತ್ಸಾಹ ಬೆಂಬಲ ದೊರೆತಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಚಲನಚಿತ್ರವನ್ನು ಎಂ.ಎನ್.ಆರ್.ಪ್ರೊಡಕ್ಷನ್ ಸಂಸ್ಥೆಯಿಂದ ನೀಡಲಿದ್ದೇವೆ ಎಂದು ಡಾ.ಎಂ.ಎನ್. ರಾಜೇಂದ್ರಕುಮಾರ್ ಹೇಳಿದರು.