ಬಿಜೆಪಿ ವಿರುದ್ಧ ಎನ್‌ಎಸ್‌ಯುಐ ದೂರು
ಮಂಗಳೂರು: ಕರಾವಳಿಯಲ್ಲಿ ಗಣೇಶೋತ್ಸವ ನಡೆಸುವುದಕ್ಕೆ ರಾಜ್ಯ ಸರ್ಕಾರ ವಿಘ್ನ ತಂದಿದೆ, ಸಿದ್ದರಾಮಯ್ಯ ಅವರದ್ದು ಹಿಂದು ವಿರೋಧಿ ಸರ್ಕಾರ ಇತ್ಯಾದಿ ಬರಹಗಳನ್ನು ಹಾಕಿ ಕರ್ನಾಟಕ ರಾಜ್ಯ ಬಿಜೆಪಿಯು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ವತಿಯಿಂದ ಮಂಗಳೂರಿನ ಬರ್ಕೆ ಠಾಣೆಗೆ ದೂರು ನೀಡಲಾಗಿದೆ.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ದೂರು ನೀಡಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಜ್ಯ ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊ ಬಳಸಿ, ವಿಘ್ನ ವಿನಾಯಕನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವಿಘ್ನ ಎಂಬ ಶೀರ್ಷಿಕೆಯಲ್ಲಿ ಗಣೇಶೋತ್ಸವ ನೆಪದಲ್ಲಿ ಪೊಲೀಸರು ಧ್ವನಿವರ್ಧಕಕ್ಕೆ ರಾತ್ರಿ ವೇಳೆ ಅಡ್ಡಿ ಪಡಿಸಿದ ಪತ್ರಿಕಾ ಸುದ್ದಿಯನ್ನು ಬಳಸಿ ಅಣಕಿಸಿ ಬರೆದಿದೆ. ’ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ವಿಘ್ನ ವಿನಾಯಕನ ಕಾರ್ಯಕ್ರಮಕ್ಕೆ ಅಡ್ಡಿ ತಂದು ಧ್ವನಿ ವರ್ಧಕಗಳನ್ನು ಹೊತ್ತೊಯ್ದಿದೆ.’
ದಿನಕ್ಕೆ ೫ ಬಾರಿ ಕೂಗುವ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಮುಟ್ಟುವ ತಾಕತ್ತು ಈ ಹಿಂದೂ ವಿರೋಧಿ ಸಿದ್ದರಾಮಯ್ಯ ನವರಿಗಿಲ್ಲ. ಕಳೆದ ಬಾರಿ ಗಣೇಶನ ಮೂರ್ತಿಯನ್ನೇ ಬಂಧಿಸಿದ ಸರ್ಕಾರ, ಕೆರಗೋಡಿನಲ್ಲಿ ಭಗವಾಧ್ವಜ ಕಿತ್ತೆಸೆದಿದ್ದ ಸರ್ಕಾರ, ಮತ್ತೆ ಹಿಂದೂಗಳ ಮೇಲಿನ ಪ್ರಹಾರ ಮುಂದುವರೆಸಿದೆ.’ ಎಂಬಿತ್ಯಾದಿ ಬರಹಗಳನ್ನು ಹಾಕಿದ್ದು ಇದು ಸಾರ್ವಜನಿಕರನ್ನು ಪ್ರಚೋದಿಸುವಂತಿದ್ದು ಗಲಭೆಗೆ ದುಷ್ಪ್ರೇರಣೆ ನೀಡುವಂತಿದೆ.
ಜನರಲ್ಲಿ ದ್ವೇಷದ ಭಾವನೆ ಹುಟ್ಟುಹಾಕಿ ಅಪರಾಧ ಕೃತ್ಯವೆಸಗುವಂತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ, ಪ್ರಚೋದನಕಾರಿಯಾಗಿ ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಒಂದು ಸಮುದಾಯದ ಜನರನ್ನು ಮತ್ತೊಂದು ಸಮುದಾಯದ ಜನರ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಪೋಸ್ಟ್ ಮಾಡಿದ್ದಾರೆ. ರಾಜ್ಯ ಸರ್ಕಾರವು ನಿರ್ದಿಷ್ಟ ಅವಧಿಗೆ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳಿಗೆ ಡಿ.ಜೆ ಅಳವಡಿಸುವುದನ್ನು ನಿಷೇದಿಸಿ ಬೇರೆ ಸೌಂಡ್ ಸ್ವಿಸ್ಟಮ್ ಗೆ ಅವಕಾಶ ನೀಡಿದ್ದರೂ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿ ದ್ವೇಷ ಭಾವನೆ ಹುಟ್ಟುವಂತೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರನ್ನು ಪರಿಗಣಿಸಿ ಬಿಎನ್‌ಎಸ್ ೩೫೩ ಪ್ರಕಾರ ಕೇಸು ದಾಖಲಿಸಲಾಗಿದೆ.