ಹಳೆಯ ಸಂಸ್ಕೃತಿಯನ್ನು ಯುವಜನಾಂಗಕ್ಕೆ ತಿಳಿಸಿ ಉಳಿಸುವ ಕೆಲಸ ಮಾಡಬೇಕು: ಡಾ. ಜಾನಪದ ಎಸ್. ಬಾಲಾಜಿ
ಮಂಗಳೂರು: ಹಳೆಯ ಸಂಸ್ಕೃತಿಯನ್ನು ಯುವಜನಾಂಗಕ್ಕೆ ತಿಳಿಸಿ ಉಳಿಸುವ ಕೆಲಸ ನಮ್ಮ ಸಂಘಟನೆಯಿಂದ ಮಾಡುತ್ತಿದ್ದೇವೆ ಎಂದು ಕನ್ನಡ ಜಾನಪದ ಪರಿಷತ್, ಬೆಂಗಳೂರು ರಾಜ್ಯಾಧ್ಯಕ್ಷ, ಜಾನಪದ ಯುವ ಬ್ರಿಗೇಡ್ ಹಾಗೂ ಭಾರತ ಸರಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ಅವರು ಸುರತ್ಕಲ್‌ನ ಗೋವಿಂದದಾಸ ಪದವಿ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಂಗ ಸಂಸ್ಥೆ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕ ದಕ್ಷಿಣ ಕನ್ನಡ ಗೋವಿಂದದಾಸ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಸಹಯೋಗದೊಂದಿಗೆ ಉದ್ಘಾಟನೆ ಮತ್ತು ಪದ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಎಂಬುದು ಅದ್ಬುತವಾದ ಕಣಜವಾಗಿದೆ, ಜನಪದ ಎಂಬುದು ಒಂದು ನಮ್ಮ ದೊಡ್ಡ ಪರಂಪರೆ, ವಿಜ್ಞಾನ ಎಷ್ಟೇ ಮುಂದುವರಿದರೂ ಜನಪದ ನಾಶವಾಗೊಲ್ಲ, ಜನಪದ ಎಂಬುದು ಬಾಯಿಯಿಂದ ಬಾಯಿಗೆ ಬಂದಿರುವಂತಹದು ಅಲಿಖಿತ ಸಂವಿಧಾನವಾಗಿದೆ, ಜಾನಪದ ಉಳಿವಿಗೋಸ್ಕಾರ ನಾವು ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರಾಂಶುಪಾಲ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಎಚ್. ಜಯಚಂದ್ರ ಹತ್ವಾರ್, ಗೋವಿಂದದಾಸ್ ಕಾಲೇಜಿನ ನಿರ್ದೇಶಕ ರಮೇಶ್ ಭಟ್, ಗೋವಿಂದದಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಮತ್ತಿತರರು ಉಪಸ್ಥಿತರಿದ್ದರು.
ಸಹ ಸಂಚಾಲಕ ಸೌರವ್ ಶ್ರೀಯಾನ್ ಸುರತ್ಕಲ್, ಮೂಡಬಿದ್ರೆ ತಾಲೂಕು ಸಂಚಾಲಕ ಕೌಶಲ್ ರಾವ್ ಪುತ್ತಿಗೆ, ಬಂಟ್ವಾಳ ತಾಲೂಕು ಸಂಚಾಲಕ ಸತ್ಯಜಿತ್ ಎಸ್. ರಾವ್, ಕಡಬ ತಾಲೂಕು ಸಂಚಾಲಕ ಶ್ರೇಯ ರೋಹಿತ್ ಉಚ್ಚಿಲ, ಬೆಳ್ತಂಗಡಿ ತಾಲೂಕು ಸಂಚಾಲಕ ಹರ್ಷಲ್ ಉಜಿರೆ ಪದವಿ ಸ್ವೀಕರಿಸಿದರು.
ದ.ಕ. ಜಿಲ್ಲಾ ಸಂಚಾಲಕ ಸಂಪತ್ ಎಸ್.ಬಿ., ಹೊಸಬೆಟ್ಟು ಸ್ವಾಗತಿಸಿ, ಮಂಗಳೂರು ತಾಲೂಕು ಸಂಚಾಲಕ ಕಾರ್ತಿಕ್ ರಾವ್ ವಂದಿಸಿದರು. ಶ್ರೇಯ ರೋಹಿತ್ ಉಚ್ಚಿಲ ನಿರೂಪಿಸಿದರು.