
ಕುಸಿದು ಬಿದ್ದು ನಿರ್ವಾಹಕ ಸಾವು
ಮಂಗಳೂರು: ಕಾಲೇಜು ಬಸ್ಸಿನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆಯಲ್ಲೇ ನಿರ್ವಾಹಕರೋರ್ವರು ಹಠಾತ್ತನೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಅಡ್ಯಾರು ಬಳಿ ಇಂದು ಬೆಳಗ್ಗೆ ನಡೆದಿದೆ. ಕುತ್ತಾರು ಪದವು ನಿವಾಸಿ ಸಂತೋಷ್ (40) ಮೃತ ದುರ್ದೈವಿ.
ದೇರಳಕಟ್ಟೆ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯಕ್ಕೆ ಸೇರಿದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಬೆಳಗ್ಗಿನ ವೇಳೆ ಶಾಲಾ ವಿದ್ಯಾರ್ಥಿಗಳನ್ನು ಬಸ್ಸಿಗೆ ಹತ್ತಿಸುತ್ತಿರುವಾಗಲೇ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಸಂತೋಷ್ ಅವರನ್ನ ಪಡೀಲಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಸಂತೋಷ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಂತೋಷ್ ಅವರು ಕಳೆದ ಹಲವು ವರ್ಷಗಳಿಂದ ನಿಟ್ಟೆ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ನಿಟ್ಟೆ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಸರಕಾರಿ ಶಾಲೆ, ಆಶ್ರಮಗಳಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಯ ಬಸ್ಸುಗಳಲ್ಲೇ ಶಾಲೆಗೆ ಬಿಡುವ ಸೇವೆಯನ್ನು ನಡೆಸುತ್ತಿದೆ. ಮಕ್ಕಳನ್ನ ಶಾಲೆಗೆ ಬಿಡುವ ನಿಟ್ಟೆ ಸಂಸ್ಥೆಯ ಬಸ್ಸಿನಲ್ಲೇ ಸಂತೋಷ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಸಂತೋಷ್ ಅವರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.