
ಅನಿಲ ಸೋರಿಕೆ: ನಾಲ್ವರು ಕಾರ್ಮಿಕರು ಅಸ್ವಸ್ಥ
Friday, August 1, 2025
ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾದ ಘಟನೆ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ತೀವ್ರ ಅಸ್ವಸ್ಥಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 25 ಮಂದಿಅಸ್ವಸ್ಥಗೊಂಡಿದ್ದು, ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಂಗಳೂರು ವಿಭಾಗ ಸಹಾಯಕ ಆಯುಕ್ತ ಹರ್ಷವರ್ಧನ್ ಸೂಚನೆಯಂತೆ ಸ್ಥಳಕ್ಕೆ ಮಂಗಳೂರು ತಾಲೂಕು ತಹಸೀಲ್ದಾರ್ ರಮೇಶ್ ಬಾಬು, ಸುರತ್ಕಲ್ ಹೋಬಳಿ ಉಪ ತಹಸೀಲ್ದಾರ್ ನವೀನ್, ಆರ್.ಐ ಪ್ರಸಾದ್, ಗ್ರಾಮ ಕರಣಿಕರಾದ ಅನುಷಾ ಆಗಮಿಸಿ ತುರ್ತು ಕ್ರಮ ಕೈಗೊಂಡಿದ್ದಾರೆ.
ಅಲ್ಲದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಅಗ್ನಿ ಶಾಮಕ ದಳ ಹಾಗೂ ಪಣಂಬೂರು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ನಾಲ್ವರಿಗೆ ಉಸಿರಾಟದಲ್ಲಿ ತೀವ್ರ ತೊಂದರೆ ಕಂಡುಬಂದಿದ್ದು ಅವರನ್ನು 48 ಗಂಟೆ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದರು. ಘಟಕದಲ್ಲಿ ಸುಮಾರು 200 ಮಂದಿ ಕೆಲಸ ಮಾಡುತ್ತಿದ್ದರು.
ಅನಿಲ ಸೋರಿಕೆಯಿಂದಾಗಿ ಪರಿಸರದಲ್ಲಿ ಸಾಕಷ್ಟು ದುರ್ವಾಸನೆ ಆವರಿಸಿದ್ದು ಕೈಗಾರಿಕಾ ಘಟಕಗಳ ಕಾರ್ಮಿಕರು ಭೀತಿಗೊಂಡು ರಸ್ತೆಗೆ ಓಡಿ ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.