
ಡಿಜಿಟಲ್ ಯುಗದಲ್ಲೂ ಮಹತ್ವ ಕಳೆದುಕೊಳ್ಳದ ಗ್ರಂಥಾಲಯ: ವಾಮನ ಕುದ್ರೋಳಿ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಗ್ರಂಥಾಲಯ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥ್ ಅವರ 133ನೇ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಎಸ್.ಆರ್. ರಂಗನಾಥ್ ಅವರು ತಮ್ಮ ಪಂಚಸೂತ್ರಗಳಲ್ಲಿ ಒಂದಾದ ಸಮಯ ಉಳಿಸಲು ವಿಷಯಗಳ ಆಧಾರದ ಮೇಲೆ ಪುಸ್ತಕಗಳನ್ನು ವರ್ಗೀಕರಿಸುವ ಕುರಿತು ಹೆಚ್ಚು ಮಹತ್ವ ನೀಡಿದವರು. ವಿಶ್ವದಲ್ಲಿ ಒಂದು ನಿಮಿಷಕ್ಕೆ ಅನೇಕ ಪುಸ್ತಕಗಳು ಪ್ರಕಟವಾಗುತ್ತವೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳ ವಿಭಾಗವೇ ಇರುತ್ತದೆ. ಇದನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಶಿಕ್ಷಣ ಸಂಸ್ಥೆಯೊಂದಕ್ಕೆ ಗ್ರಂಥಾಲಯ ಮೆದುಳು ಇದ್ದ ಹಾಗೆ. ಗ್ರಂಥಾಲಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಗತ್ತಿನಲ್ಲಿ ಅತ್ಯಂತ ಹಳೆಯ ಎರಡು ಪುಸ್ತಕಗಳಲ್ಲಿ ಒಂದು ಪುಸ್ತಕ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಇದೆ ಎಂಬುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಆಂತರಿಕ ಗುಣಮಟ್ಟ ಖಾತರಿಕೋಶ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಗ್ರಂಥಪಾಲಕಿ ಡಾ. ವನಜಾ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.