ಭಾರೀ ಮಳೆಗೆ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆಗಳಿಗೆ ಹಾನಿ: ತುರ್ತು ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆಗೆ ಶಾಸಕ ಕಾಮತ್ ಆಗ್ರಹ

ಭಾರೀ ಮಳೆಗೆ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆಗಳಿಗೆ ಹಾನಿ: ತುರ್ತು ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆಗೆ ಶಾಸಕ ಕಾಮತ್ ಆಗ್ರಹ


ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆಗಳು ಹಾಳಾಗಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇವೆಲ್ಲದರ ಪುನರ್ ನಿರ್ಮಾಣಕ್ಕಾಗಿ ತುರ್ತು ಕಾಮಗಾರಿ ಅಗತ್ಯವಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಅಧಿವೇಶನದಲ್ಲಿ ಆಗ್ರಹಿಸಿದರು.

ಪ್ರಾಕೃತಿಕ ವಿಕೋಪದಿಂದಾಗಿರುವ ಹಾನಿಗೆ ಕಳೆದೆರಡು ವರ್ಷಗಳಿಂದ ರಾಜ್ಯ ಸರ್ಕಾರ ಯಾವುದೇ ವಿಶೇಷ ಅನುದಾನ ಬಿಡುಗಡೆಗೊಳಿಸಿಲ್ಲ. ಎಲ್ಲವೂ ಕೇವಲ ಹಾಳೆಗಳಲ್ಲಿವೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ. ಇದೊಂತರಾ ಕನ್ನಡಿಯೊಳಗಿನ ಗಂಟಾಗಿದೆ. ಮೊದಲನೇ ಅವಧಿಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಅರ್ಧದಷ್ಟು ಕೆಲಸ ಆಗಿತ್ತು. ಈ ಸರ್ಕಾರ ಬಂದ ನಂತರ ಅದಕ್ಕೆ ತಡೆ ನೀಡಿದ್ದರಿಂದ ಉಳಿದ ಕಾಮಗಾರಿಗಳು ಬಾಕಿಯಾಗಿವೆ. ಪ್ರಸ್ತುತ ಮ.ನ.ಪಾ ದಲ್ಲಿ ಬಜೆಟ್ ಕೊರತೆಯಾಗಿದ್ದು ಪರಿಹಾರ ಕಾರ್ಯ, ಅಭಿವೃದ್ಧಿ ಕಾರ್ಯಕ್ಕೂ ದುಡ್ಡಿಲ್ಲ. ಗುತ್ತಿಗೆದಾರರಿಗೆ 200 ಕೋಟಿಗೂ ಅಧಿಕ ಪಾವತಿ ಬಾಕಿಯಿದ್ದು ಎಲ್ಲಾ ಕಾಮಗಾರಿಗಳೂ ಸಹ ಸ್ಥಗಿತಗೊಂಡು ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಮಂಗಳೂರು ನಗರ ದಕ್ಷಿಣವು ಭೌಗೋಳಿಕವಾಗಿ ಎತ್ತರ-ತಗ್ಗು ಇರುವಂತಹ ಕ್ಷೇತ್ರ. ಇಲ್ಲಿ ದೊಡ್ಡ ದೊಡ್ಡ ನದಿಗಳು, ರಾಜಕಾಲುವೆಗಳಿದ್ದು ತೀವ್ರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಗುಡ್ಡಗಳು ಕುಸಿದು ಮನೆಗಳಿಗೆ ಹಾನಿಯಾಗಿದ್ದು ಅವರಿಗೆ ಪಾಲಿಕೆಯಿಂದಾಗಲೀ, ಪ್ರಾಕೃತಿಕ ವಿಕೋಪದಡಿಯಾಗಲೀ ಪರಿಹಾರ ಸಿಗುವುದಿಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇಂತಹ ಸಂದರ್ಭದಲ್ಲಿ ನಮ್ಮ ಕ್ಷೇತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಗುಡ್ಡ ಕುಸಿತಕ್ಕೆ 45 ಕೋಟಿ, ರಾಜಕಾಲುವೆ ದುರಸ್ತಿಗೆ 85 ಕೋಟಿ ಸೇರಿದಂತೆ ಪಿಡಬ್ಲ್ಯೂಡಿ ಇಲಾಖೆಯಿಂದಲೂ ಅನುದಾನವನ್ನು ತಂದಿದ್ದೆ. ಈಗಿನ ಕಾಂಗ್ರೆಸ್ ಸರ್ಕಾರ ಇಂತಹ ಪ್ರಕರಣಗಳಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದು, ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಸಮಸ್ತ ಮಂಗಳೂರಿನ ಜನತೆಯ ಪರವಾಗಿ ಕೈ ಜೋಡಿಸಿ ಮನವಿ ಮಾಡುತ್ತೇನೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article