
ಅನನ್ಯಾ ಭಟ್ ಹೆಸರಿನ ವಿದ್ಯಾರ್ಥಿನಿಯೇ ಇಲ್ಲ..?
ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆ ನಡೆಯುತ್ತಿರುವಾಗಲೇ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಪ್ರಕರಣ ಭಾರೀ ಚರ್ಚೆ ಹುಟ್ಟುಹಾಕಿದೆ ಸೌಜನ್ಯ ಪ್ರಕರಣದಂತೆ ‘ಜಸ್ಟಿಸ್ ಫಾರ್ ಅನನ್ಯಾ ಭಟ್’ ಎಂಬ ಕೂರು ಆರಂಭಗೊಂಡಿದೆ. ಆದರೆ ಇದೀಗ ಅನನ್ಯಾ ಭಟ್ ಎಂಬ ದಾಖಲೆಯೇ ಇಲ್ಲ ಎನ್ನಲಾಗುತ್ತಿದೆ.
ತನ್ನ ಮಗಳು ಕಾಣೆಯಾಗಿದ್ದಾಳೆ, ಆಕೆಯನ್ನು ಹುಡುಕಿ ನ್ಯಾಯ ನೀಡಿ ಎಂದು ಅನನ್ಯಾ ಭಟ್ ತಾಯಿ ಸಿಬಿಐ ಮಾಜಿ ಉದ್ಯೋಗಿ ಸುಜಾತಾ ಭಟ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ತನಿಖೆ ನಡೆಸಿದ ಪೊಲೀಸರು ಅನನ್ಯಾ ಭಟ್ ಹೆಸರಿನ ವಿದ್ಯಾರ್ಥಿನಿಯೇ ಇಲ್ಲ ಎನ್ನುತ್ತಿದ್ದಾರೆ. ಮಣಿಪಾಲ್ ಗ್ರೂಪ್ ಮೆಡಿಕಲ್ ಕಾಲೇಜ್, ಕಸ್ತೂರ್ ಬಾ ಮೆಡಿಕಲ್ ಕಾಲೇಜು ಮಣಿಪಾಲದ ಎಲ್ಲಾ ದಾಖಲೆ ಪರಿಶೀಲಿಸಿದಾಗ, ಅನನ್ಯಾ ಭಟ್ ಹೆಸರಿನ ವಿದ್ಯಾರ್ಥಿನಿಯೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ.
1998ರಿಂದ 2005ರ ತನಕದ ದಾಖಲೆಗಳ ಹುಡುಕಾಟ ನಡೆದಿದೆ. ಅನನ್ಯಾ ಭಟ್ W/O ಅನಿಲ್ ಭಟ್ ಹೆಸರಿಗೆ ಹುಡುಕಾಟ ಮಾಡಿದ್ದಾರೆ. ಏಳು ವರ್ಷದ ದಾಖಲೆಗಳಲ್ಲೂ ಅನನ್ಯಾ ಡಾಟರ್ ಆಫ್ ಅನಿಲ್ ಭಟ್ ಎನ್ನುವ ಹೆಸರು ಪತ್ತೆಯಾಗಿಲ್ಲ. ಮಂಗಳೂರಿನ ಕಸ್ತೂರ್ ಬಾ ಮೆಡಿಕಲ್ ಕಾಲೇಜಿಗೂ ಪೊಲೀಸರು ಭೇಟಿ ನೀಡಿದ್ದಾರೆ. ಈ ಕಾಲೇಜಿನ ದಾಖಲೆಗಳಲ್ಲೂ ಅನನ್ಯಾ ಭಟ್ ಹೆಸರಿಲ್ಲ.
2003ರಲ್ಲಿ ಧರ್ಮಸ್ಥಳಕ್ಕೆ ತನ್ನ ಸ್ನೇಹಿತೆಯರ ಜೊತೆ ಬಂದಿದ್ದ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಸುಜಾತಾ ಭಟ್ ದೂರು. ಸುಜಾತಾ ಭಟ್ ಬಳಿಯೂ ಅನನ್ಯಾ ಪೋಟೊ ಸೇರಿದಂತೆ ಇನ್ನಿತರ ದಾಖಲೆಗಳಿಲ್ಲ. ಕೇಳಿದರೆ ಮನೆಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ ಎನ್ನುತ್ತಿದ್ದಾರೆ. ಒಟ್ಟು ಅನನ್ಯಾ ಭಟ್ ಪ್ರಕರಣವೇ ಗೊಂದಲ ಮೂಡಿಸಿದೆ.