ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ: ಧರ್ಮಸ್ಥಳ ದೇವಸ್ಥಾನ ಗುರಿ..?
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ತಪ್ಪಾಗಿ ಸ್ಫೋಟಗೊಂಡಿತ್ತು. 90 ನಿಮಿಷ ಎಂದು ಮಾಡಬೇಕಿದ್ದ ಟೈಮರ್ ಸೆಟ್ಟಿಂಗ್ 9 ಎಂದು ಆಗಿದ್ದರಿಂದ ಆಟೋದಲ್ಲಿಯೇ ಸ್ಫೋಟವಾಗಿತ್ತೆಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಗಳು ಕ್ರಿಪ್ಟೋ ಕರೆನ್ಸಿ ಮೂಲಕ ವಿದೇಶದಿಂದ ಹಣ ಪಡೆದಿರುವುದು ಪತ್ತೆಯಾಗಿದ್ದರಿಂದ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಆರೋಪಿಗಳು ಬಳಸಿದ್ದ ಬ್ಯಾಂಕ್ ಖಾತೆಗಳನ್ನು ಇಡಿ ಮುಟ್ಟುಗೋಲು ಹಾಕಿದ್ದು ಅದರಲ್ಲಿರುವ ಹಣವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಸಯ್ಯದ್ ಯಾಸಿನ್ ಖಾತೆಯಲ್ಲಿದ್ದ 29,176 ರೂ.ವನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಂಗಳೂರಿನ ನಾಗುರಿಯಲ್ಲಿ ಆರೋಪಿ ಮೊಹಮ್ಮದ್ ಶಾರೀಕ್ ಆಟೋದಲ್ಲಿ ಬರುತ್ತಿದ್ದಾಗ ಕುಕ್ಕರ್ ಸ್ಫೋಟಗೊಂಡಿತ್ತು. ಆಟೋ ಚಾಲಕನ ದೂರಿನ ಮೇರೆಗೆ ಕಂಕನಾಡಿ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ಆಬಳಿಕ ಸ್ಫೋಟಕ ವಸ್ತುಗಳ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು ಮತ್ತು ಎನ್‌ಐಎ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿತ್ತು.
ತನಿಖೆ ಸಂದರ್ಭದಲ್ಲಿ ಐಸಿಸ್ ಪ್ರೇರಣೆಯಂತೆ ಆರೋಪಿಗಳು ದುಷ್ಕೃತ್ಯ ಎಸಗಲು ಮುಂದಾಗಿದ್ದರು ಎನ್ನುವುದು ಬೆಳಕಿಗೆ ಬಂದಿತ್ತು. ಅಲ್ಲದೆ, ವಿದೇಶಿ ಫಂಡಿಂಗ್ ಹಣದಿಂದಲೇ ಐಇಡಿ ಸ್ಫೋಟಕ ಜೋಡಿಸಲು ಬೇಕಾದ ವಸ್ತುಗಳನ್ನು ಖರೀದಿಸಿದ್ದರು ಮತ್ತು ಮೈಸೂರು ನಗರದ ಅಡಗುತಾಣಗಳನ್ನು ಮಾಡಿಕೊಂಡು ಸ್ಕೆಚ್ ಹಾಕಿದ್ದರು ಎನ್ನೋದು ಪತ್ತೆಯಾಗಿತ್ತು. ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಬಾಂಬ್ ಇಡುವುದು ಆರೋಪಿಗಳ ಯೋಜನೆಯಾಗಿತ್ತು. ಆರೋಪಿ ಮಾಜ್ ಮುನೀರ್ ಬಾಂಬ್ ಟೈಮರನ್ನು 90 ನಿಮಿಷಗಳ ಬದಲಿಗೆ 9 ಸೆಕೆಂಡ್ ಗೆ ಹೊಂದಿಸಿದ್ದರಿಂದ ಆಟೋದಲ್ಲಿಯೇ ಸ್ಫೋಟಗೊಂಡು, ಸಂಭಾವ್ಯ ದುಷ್ಕೃತ್ಯ ವಿಫಲಗೊಂಡಿತ್ತು.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೊಹಮ್ಮದ್ ಶಾರಿಕ್ ಚಿಕಿತ್ಸೆಗೆ ದಾಖಲಾಗಿದ್ದಾಗ ಆತನ ಬ್ಯಾಗ್ ನಲ್ಲಿದ್ದ 39,228 ರೂ. ಹಣವನ್ನು ಇಡಿ ವಶಕ್ಕೆ ಪಡೆದಿದೆ. ಪ್ರಕರಣದ ಆರೋಪಪಟ್ಟಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವು ಭಾರತ ಸರಕಾರದ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುವ ಉದ್ದೇಶದಿಂದ ಐಸಿಸ್ ಉಗ್ರರ ಯೋಜನೆಯ ಭಾಗವಾಗಿತ್ತು ಎಂದು ಉಲ್ಲೇಖಿಸಲಾಗಿದೆ.
’ಕರ್ನಲ್’ ಎಂಬ ಕೋಡ್ ಹೆಸರಿನಲ್ಲಿದ್ದ ಐಸಿಸ್ ಉಗ್ರ, ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಇತರ ಆರೋಪಿಗಳಿಗೆ ವಿಕಾರ್ ಆಪ್/ಟೆಲಿಗ್ರಾಂ ಇತ್ಯಾದಿಗಳ ಮೂಲಕ ಐಇಡಿ ಬಾಂಬ್ ತಯಾರಿಸಲು ತರಬೇತಿ ನೀಡಿದ್ದ. ಅಲ್ಲದೆ, ನಾನಾ ಬೇನಾಮಿ ಖಾತೆಗಳು ಮತ್ತು ಕ್ರಿಪ್ಟೋ ಕರೆನ್ಸಿಗಳ ಮೂಲಕ ಹಣದ ವ್ಯವಸ್ಥೆ ಮಾಡಿದ್ದ. ಕ್ರಿಪ್ಟೋದಲ್ಲಿ ಬರುತ್ತಿದ್ದ ಹಣವನ್ನು ಸಯ್ಯದ್ ಯಾಸಿನ್ ಮತ್ತು ಮೊಹಮ್ಮದ್ ಶಾರಿಕ್ ತಮ್ಮ ಏಜೆಂಟ್‌ಗಳ ಮೂಲಕ ನಗದೀಕರಿಸುತ್ತಿದ್ದರು.
ಕೆಲವು ಸಂದರ್ಭಗಳಲ್ಲಿ ನಗದೀಕರಿಸಿದ ಹಣವನ್ನು ಫಿನೋ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಬೇನಾಮಿ ಖಾತೆಗಳ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗುತ್ತಿತ್ತು. ನಾನಾ ಕ್ರಿಪ್ಟೋ ಕರೆನ್ಸಿ ಖಾತೆಗಳಿಂದ ಒಟ್ಟು 2,86,008 ರೂ. ಹಣವನ್ನು ಬೇನಾಮಿ ಖಾತೆಗಳಿಗೆ ಜಮಾ ಮಾಡಲಾಗಿತ್ತು. ಪಿಒಎಸ್ ಏಜೆಂಟ್‌ಗಳಿಂದ 41,680 ರೂ. ನಗದು ರೂಪದಲ್ಲಿ ಸಂಗ್ರಹಿಸಲಾಗಿತ್ತು ಎಂಬುದು ಇಡಿ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ.