ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ

ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ


ಉಜಿರೆ: ತೀವ್ರವಾದ ಬೆನ್ನುನೋವಿನಿಂದ ನಡೆಯಲು ಕಷ್ಟಪಡುತ್ತಿದ್ದ 58 ವರ್ಷ ವಯಸ್ಸಿನ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಉಜಿರೆ ಎಸ್‌ಡಿಎಂ ಆಸ್ಪತ್ರೆಗೆ ಆಗಮಿಸಿದ್ದರು. ಇಲ್ಲಿನ ವೈದ್ಯರು ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ ಸಮಸ್ಯೆ ಇರುವ ಬಗ್ಗೆ ತಿಳಿಯಿತು.

ಕನಿಷ್ಟ ಆಕ್ರಮಣಕಾರಿ ಸರ್ಜರಿ ಮತ್ತು ಎಂಡೋಸ್ಕೋಪಿಕ್ ಸ್ಪೈನ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆಯುತ್ತಿರುವ, ಈಗಾಗಲೇ ಎಂಡೋಸ್ಕೋಪಿಕ್ ಸ್ಪೈನ್ ಸರ್ಜರಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅನುಭವ ಹೊಂದಿರುವ ಇಲ್ಲಿನ ಮೂಳೆ ಶಸ್ತ್ರಚಿಕಿತ್ಸಕರಾಗಿರುವ ಡಾ. ಶತಾನಂದ ಪ್ರಸಾದ್ ರಾವ್ ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಈ ಮಹಿಳೆಯ ಎದೆಗೂಡಿನ ಬೆನ್ನುಮೂಳೆಯ ಭಾಗವಾಗಿರುವ ಡಿ-10 ಕಶೇರುಖಂಡದ ಮುರಿತವಾಗಿರುವುದು ಕಂಡುಬಂದಿತ್ತು. ಸಮಸ್ಯೆಯನ್ನು ಖಚಿತಪಡಿಸಿಕೊಂಡ ವೈದ್ಯರು ಕನಿಷ್ಟ ಆಕ್ರಮಣಕಾರಿ ಮೂಲಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಅರೆವಳಿಕೆ ತಜ್ಞರಾದ ಡಾ. ಸುಪ್ರೀತ್ ಶೆಟ್ಟಿ ಸಹಕರಿಸಿದರು. ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ. ಶತಾನಂದ ಪ್ರಸಾದ್ ರಾವ್ ತಿಳಿಸಿದರು.

ಡಾ. ಶತಾನಂದ ಪ್ರಸಾದ್ ರಾವ್ ಇವರು ಎಂಡೋಸ್ಕೋಪಿಕ್ ಸ್ಪೈನ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಮಹೇಶ್ ಕೆ., ಇವರ ಜೊತೆಗೂಡಿ ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಇಂಟ್ರಾ ಡ್ಯೂರಲ್ ಸ್ಪೈನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಈ ಬಾರಿ ಸ್ವತಂತ್ರವಾಗಿ ಕನಿಷ್ಟ ಆಕ್ರಮಣಕಾರಿ ಸ್ಪೈನ್ ಸರ್ಜರಿಯನ್ನು ನಡೆಸಿದ್ದಾರೆ. 

ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ, ನುರಿತ ತಜ್ಞ ವೈದ್ಯರ ತಂಡದಿಂದ ಇಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article