ಶತಾಯುಷಿ ಕ್ರೈಸ್ತ ಧರ್ಮಗುರು ವಂ. ಫಾ. ಅಲೋಶಿಯಸ್ ಡಿ’ಸೋಜಾ ನಿಧನ
Thursday, August 7, 2025
ಮಂಗಳೂರು: ಮಂಗಳೂರು ಕ್ಯಾಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಹಿರಿಯ ಧರ್ಮಗುರು ಶತಾಯುಷಿ ವಂ. ಫಾ. ಅಲೋಶಿಯಸ್ ಡಿ’ಸೋಜಾ (100) ಅವರು ಆ.7 ರಂದು ಜಪ್ಪು ಸೈಂಟ್ ಜೋಸೆಫ್ ವಾಜ್ ಹೋಂನಲ್ಲಿ ನಿಧನ ಹೊಂದಿದರು.
ಅವರ ಅಂತ್ಯಕ್ರಿಯೆಯ ಬಲಿಪೂಜೆ ಮತ್ತು ಅಂತ್ಯಕ್ರಿಯೆಯ ವಿಧಿಗಳು ಆ.8 ರಂದು ಸಂಜೆ 4 ಗಂಟೆಗೆ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿವೆ.
1953 ಆಗಸ್ಟ್ 24 ರಂದು ಗುರು ದೀಕ್ಷೆ ಪಡೆದಿದ್ದ ಅಲೋಶಿಯಸ್ ಡಿ’ಸೋಜಾ ಅವರು ಸುದೀರ್ಘ 72 ವರ್ಷಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 2025 ಜನವರಿ 29 ರಂದು ಜನ್ಮ ಶತಮಾನೋತ್ಸವ ಆಚರಿಸಿದ್ದರು. ಅವರು ಮಂಗಳೂರು ಧರ್ಮಪ್ರಾಂತ್ಯದಲ್ಲಿ 100 ವರ್ಷ ಕಾಲ ಬದುಕಿ ಬಾಳಿದ ಮೊದಲ ಧರ್ಮಗುರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಆ ಪ್ರಯುಕ್ತ ನಿವೃತ್ತಿಯ ಬಳಿಕವೂ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯಲ್ಲಿ ಇತ್ತೀಚೆಗೆ ಸಂಭ್ರಮದ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಿದ್ದರು. 100ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಪೋಪ್ ಫ್ರಾನ್ಸಿಸ್ ವಿಶೇಷ ಆಶೀರ್ವಾದವನ್ನು ನೀಡಿದ್ದರು.
ಅವರ ನಿಧನಕ್ಕೆ ಮಂಗಳೂರು ಧರ್ಮ ಪ್ರಾಂತ್ಯವು ಶೋಕ ವ್ಯಕ್ತಪಡಿಸಿದೆ.