ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ತಿಮರೋಡಿ ವಿಚಾರಣೆ
ಮಂಗಳೂರು: ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ಆರೋಪಿ ಚಿನ್ನಯ್ಯ ಬರುತ್ತಿದ್ದ ಕಿಯಾ ಕಾರೆನ್ಸ್ ಕಾರಿನಲ್ಲಿ ಮಹೇಶ್ ಶೆಟ್ಟಿ ಬೆಳ್ತಂಗಡಿ ಠಾಣೆಗೆ ಬಂದಿದ್ದಾರೆ.
ಎರಡು ದಿನಗಳ ಹಿಂದೆ ಎಸ್‌ಐಟಿ ಅಧಿಕಾರಿಗಳು ತಿಮರೋಡಿ ಮನೆಗೆ ಬಂದಿದ್ದ ವೇಳೆ ಮನೆಯಲ್ಲಿರದ ಮಹೇಶ್ ಶೆಟ್ಟಿ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಒಂದು ಗಂಟೆ 10 ನಿಮಿಷ ಕಾಲ ವಿಚಾರಣೆ ಎದುರಿಸಿದ್ದು ಆಬಳಿಕ ಎಸ್‌ಐಟಿ ಕಚೇರಿಗೆ ತೆರಳಿದ್ದಾರೆ. ಎಸ್‌ಐಟಿ ಠಾಣೆಗೆ ಬರಲು ಸೂಚನೆ ಇಲ್ಲದಿದ್ದರೂ, ಬೆಳ್ತಂಗಡಿ ಠಾಣೆ ಪಕ್ಕದಲ್ಲಿಯೇ ಇರುವ ಎಸ್‌ಐಟಿ ಕಚೇರಿಗೆ ತೆರಳಿ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಭೇಟಿಯಾಗಿದ್ದು ಕೆಲ ಹೊತ್ತಿನ ಬಳಿಕ ಅಲ್ಲಿಂದ ಹಿಂತಿರುಗಿದ್ದಾರೆ.
ವಕೀಲ ಜಗದೀಶ..
ಇದೇ ವೇಳೆ, ಬೆಳ್ತಂಗಡಿ ಪೊಲೀಸ್ ಠಾಣೆಗೆ ವಕೀಲ ಜಗದೀಶ್ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ತನ್ನ ಫೇಸ್ ಬುಕ್ ಖಾತೆ ಮೂಲಕ ಪ್ರಚೋದನಕಾರಿ ಹೇಳಿಕೆ ಬಗ್ಗೆ ಬೆಳ್ತಂಗಡಿ ನಿವಾಸಿ ಪ್ರಭಾಕರ ಗೌಡ ಎಂಬವರ ದೂರಿನಂತೆ ಪ್ರಕರಣ ದಾಖಲಾಗಿತ್ತು. ಫೇಸ್ಬುಕ್ ಖಾತೆಯಲ್ಲಿ, ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಉತ್ಖನನ ಕಾರ್ಯಕ್ಕೆ ಸಂಬಂಧಿಸಿ ಜಗದೀಶ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ, ಸಾರ್ವಜನಿಕರಿಗೆ ಅಪರಾಧ ಎಸಗಲು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಮಾಡಿದ್ದಾರೆಂದು ದೂರು ನೀಡಲಾಗಿತ್ತು. ಇದರಂತೆ, ಕಲಂ: 57 ಜೊತೆಗೆ 189(6), 191(3) ಬಿಎನ್‌ಎಸ್ 2023 ರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಟೆಣ್ಣನವರ್..
ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ಇಂದು ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಆದರೆ ಅವರ ಯಾವುದೇ ವಿಚಾರಣೆ ನಡೆದಿಲ್ಲ ಎನ್ನಲಾಗುತ್ತಿದೆ.
ಬರಲಿಲ್ಲ ಸಮೀರ್..
ಯುಟ್ಯೂಬರ್ ಸಮೀರ್ ವಿಚಾರಣೆ ಇಂದು ನಡೆಯಬೇಕಾಗಿದ್ದು, ಅನಾರೋಗ್ಯದ ಕಾರಣದಿಂದ ತನಿಖೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತನ್ನ ವಕೀಲರ ಮೂಲಕ ತಿಳಿಸಿದ್ದಾನೆ ಎನ್ನಲಾಗಿದೆ.
ಮೊಹಾಂತಿ ಭೇಟಿ..
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಎರಡು ದಿನ ರಜೆಯಲ್ಲಿ ತೆರಳಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಇಂದು ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದು, ತನಿಖೆಯ ಪ್ರಗತಿ ಪರಿಶೀಳಿಸಿದ್ದಾರೆ. ಎಸ್ಪಿ ಸೈಮನ್ ಜೊತೆಗಿದ್ದರು.