ಧರ್ಮಸ್ಥಳ ಎಸ್ಐಟಿ ತನಿಖೆಯ ದಿಕ್ಕುತಪ್ಪಿಸಲು ಬಿಜೆಪಿ  ಎಡಪಂಥೀಯರ ವಿರುದ್ಧ ಕಪೋಲಕಲ್ಪಿತ ಆರೋಪಗಳೊಂದಿಗೆ ರಂಗಕ್ಕೆ ಬಂದಿದೆ: ಸಿಪಿಐಎಂ ತಿರುಗೇಟು

ಧರ್ಮಸ್ಥಳ ಎಸ್ಐಟಿ ತನಿಖೆಯ ದಿಕ್ಕುತಪ್ಪಿಸಲು ಬಿಜೆಪಿ ಎಡಪಂಥೀಯರ ವಿರುದ್ಧ ಕಪೋಲಕಲ್ಪಿತ ಆರೋಪಗಳೊಂದಿಗೆ ರಂಗಕ್ಕೆ ಬಂದಿದೆ: ಸಿಪಿಐಎಂ ತಿರುಗೇಟು

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಹೆಣ ಹೂತು‌ ಹಾಕಿರುವ ಪ್ರಕರಣದಲ್ಲಿ ಎಸ್ಐಟಿ ಪ್ರಭಾವಗಳಿಗೆ ಮಣಿಯದೆ ತನಿಖೆ ನಡೆಸುತ್ತಿರುವುದು ಬಿಜೆಪಿ ಪಕ್ಷವನ್ನು ಹತಾಶೆಗೆ ತಳ್ಳಿದೆ. ಈ ಹತಾಶೆಯ ಪರಿಣಾಮವಾಗಿ ಎಸ್ಐಟಿ ತನಿಖೆ ಹಾಗೂ ಜನಾಕ್ರೋಶದ ದಿಕ್ಕನ್ನು ತಪ್ಪಿಸಲು ಬಿಜೆಪಿ ಪಕ್ಷದ ಶಾಸಕರು, ನಾಯಕರುಗಳು ಮೌನ ಮುರಿದು ಏಕಾಏಕಿ ರಂಗ ಪ್ರವೇಶ ಮಾಡಿದ್ದಾರೆ. ಹೋರಾಟಗಾರರ ಮೇಲೆ ಕೆಸರೆರಚಲು ತೊಡಗಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ದೌರ್ಜನ್ಯಗಳ ಎದುರಾಗಿ ದಶಕಗಳಿಂದ ಹೋರಾಟ ನಡೆಸುತ್ತಿರುವ ಎಡಪಂಥೀಯ ಪಕ್ಷಗಳ ಎದುರಾಗಿ ಸುಳ್ಳು ಕತೆಗಳನ್ನು ಕಟ್ಟಿ ಧರ್ಮ ವಿರೋಧಿ ಪಟ್ಟ ಕಟ್ಟಲು ಹತಾಷ ಯತ್ನ ನಡೆಸುತ್ತಿದ್ದಾರೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

80 ರ ದಶಕದಲ್ಲಿ ನಡೆದಿರುವ ಕಮ್ಯುನಿಸ್ಟ್ ಮುಖಂಡ ದೇವಾನಂದ ರ ಪುತ್ರಿ ಪದ್ಮಲತಾ ಅಪಹರಣ, ಕೊಲೆ ಪ್ರಕರಣದಿಂದ ಹಿಡಿದು ವೇದವಲ್ಲಿ,  ಆನೆ ಮಾವುತ ನಾರಾಯಣ, ಯಮುನ ಸಹಿತ ಸೌಜನ್ಯ ಕೊಲೆ ಪ್ರಕರಣದ ವರೆಗೂ ಬಿಜೆಪಿ ಪೂರ್ತಿ ಮೌನ ಪಾಲಿಸಿದೆ. ಈ ಸಂದರ್ಭಗಳಲ್ಲಿ ನಡೆದ ಜನ ಹೋರಾಟಗಳಿಗೆ ವಿರುದ್ದವಾಗಿ ಕಾರ್ಯಾಚರಿಸಿದೆ. ಈ ಎಲ್ಲಾ ಸಂದರ್ಭಗಳಲ್ಲಿ ಎಡಪಂಥೀಯ ಚಳವಳಿಗಳು ಜನ ಹೋರಾಟದ ಪರವಾಗಿ ಪ್ರಾಮಾಣಿಕವಾಗಿ ನಿಲ್ಲುತ್ತಾ ಬಂದಿದೆ.

ಈಗ ಎದ್ದು‌ ಬಂದಿರುವ ಕೊಲೆಗೀಡಾದ ಹತ್ತಾರು ಹೆಣಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿರುವ ಆರೋಪ, ಈ ಕುರಿತು ಎಸ್ಐಟಿ ತನಿಖೆಯ ಕುರಿತಾಗಿಯು ಬಿಜೆಪಿ ಅನುಮಾನಾಸ್ಪದ ಮೌನಕ್ಕೆ ಶರಣಾಗಿತ್ತು. ಅಧಿಕೃತ ವಿರೋಧ ಪಕ್ಷ ಎಂಬ ಕನಿಷ್ಟ ಜವಾಬ್ದಾರಿಯನ್ನೂ ನಿರ್ವಹಿಸದೆ ರಾಜಕೀಯ ದ್ರೋಹಕ್ಕೆ ಸಾಕ್ಷಿ ಒದಗಿಸಿತ್ತು.

ಈಗ ಎಸ್ಐಟಿ ಯಾವ ಪ್ರಭಾವಕ್ಕೂ ಒಳಗಾಗದೆ ತಾಳ್ಮೆಯಿಂದ ತನಿಖೆ ನಡೆಸುತ್ತಿದೆ, ದೌರ್ಜನ್ಯಕಾರಕ ವ್ಯವಸ್ಥೆಯ ಹಾಗು ಅದರ ಪರವಾಗಿರುವ ರಾಜಕೀಯ ಪಕ್ಷಗಳ ವಿರುದ್ದ ಜನಾಕ್ರೋಶ ಕ್ರೋಢೀಕರಣಗೊಳ್ಳುತ್ತಿದೆ, ಇದರಿಂದ ವಿಚಲಿತಗೊಂಡಿರುವ ಬಿಜೆಪಿ ಈಗ ತನ್ನ ಶಾಸಕರು, ನಾಯಕರನ್ನು ತನ್ನ ಹಳೆಯ ಆಯುಧವಾದ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟು ರಂಗಕ್ಕೆ ಇಳಿಸಿದೆ. ಧರ್ಮಸ್ಥಳ ಗ್ರಾಮದ ವಿಚಾರದಲ್ಲಿ ಜನಸಾಮಾನ್ಯರ ಜೊತೆ ನಿಂತಿರುವ ಎಡಪಂಥೀಯ ಚಳವಳಿಗಳನ್ನು ಧರ್ಮ ವಿರೋಧಿಗಳು ಎಂದು ಬಿಂಬಿಸುವ ಹಾಸ್ಯಾಸ್ಪದ ಆರೋಪಗಳನ್ನು ಮಾಡುತ್ತಿದೆ.  ಬಿಜೆಪಿಯ ಈ ಕೀಳು ಅಭಿರುಚಿಯ ರಾಜಕಾರಣವನ್ನು ಸಿಪಿಐಎಂ ಪಕ್ಷ ದೃಢವಾಗಿ ಎದುರಿಸಲಿದೆ, ಬಿಜೆಪಿ ಪರಿವಾರದ ದ್ವಂದ, ಪಾಳೇಗಾರಿಕೆ ಮೌಲ್ಯಗಳು, ಶಕ್ತಿಗಳ ಪರವಾದ ಪ್ರತಿಗಾಮಿ ನಿಲುವುಗಳನ್ನು ಬಯಲಿಗೆ ಎಳೆಯಲಿದೆ. ಎಲ್ಲಾ ಜನಪರ ಚಳವಳಿಗಳನ್ನು ಒಂದು ಗೂಡಿಸಿ ಜನ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article