ಸುಜಾತ ಭಟ್ ವಿಚಾರಣೆ ಸಂಭವ
Sunday, August 24, 2025
ಮಂಗಳೂರು: ಅನನ್ಯಾ ಭಟ್ ಎನ್ನುವ ಪುತ್ರಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಕ್ಷೇತ್ರದ ವಿರುದ್ಧ ಆರೋಪ ಮಾಡಿ, ಬಳಿಕ ಅದನ್ನು ಅಲ್ಲಗಳೆದು ಗೊಂದಲದ ಹೇಳಿಕೆ ನೀಡುತ್ತಿರುವ ಬೆಂಗಳೂರು ನಿವಾಸಿ ಸುಜಾತ ಭಟ್‌ಗೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ನೋಟಿಸ್ ನೀಡುವ ಸಂಭವ ಇದೆ.
ಅನನ್ಯಾ ಭಟ್ ತನ್ನ ಪುತ್ರಿ ಎಂಬ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ತನಿಖಾ ಅಧಿಕಾರಿಗಳ ದಾರಿತಪ್ಪಿಸುತ್ತಿರುವ ಆರೋಪದಲ್ಲಿ ಸುಜಾತ ಭಟ್ ಅವರನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪ್ರಸಕ್ತ ಸುಜಾತ ಭಟ್ ವಾಸಿಸುವ ಬೆಂಗಳೂರಿನ ಮನೆಗೆ ಬನಶಂಕರಿ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.
ಅಣ್ಣಪ್ಪನಿಗೆ ಈಡುಗಾಯಿ..
ಧರ್ಮಸ್ಥಳದ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದ ಮಾಸ್ಕ್‌ಮ್ಯಾನ್ ಯಾನೆ ಚಿನ್ನಯ್ಯ ಅದೆಲ್ಲ ಸುಳ್ಳು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇದರಿಂದ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ಅಂಟಿದ್ದ ಕಳಂಕವೊಂದು ನಾಶವಾಗಿದೆ. ಇದರ ಬೆನ್ನಲ್ಲೇ ಧರ್ಮಸ್ಥಳ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜತೆಗೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಕುತಂತ್ರ ಮಾಡಿದವರಿಗೆ ಅಣ್ಣಪ್ಪನೇ ತಕ್ಕ ಶಾಸ್ತಿ ಮಾಡಲಿ ಎಂದು ಅಣ್ಣಪ್ಪ ಸ್ವಾಮಿಯ ದೇಗುಲದ ಮುಂದೆ ಈಡುಗಾಯಿ ಒಡೆದು ಪ್ರಾರ್ಥಿಸಿದ್ದಾರೆ.