ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ: ಕೇಂದ್ರ ತನಿಖಾ ಸಂಸ್ಥೆಯ ಗೊಂದಲ

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ: ಕೇಂದ್ರ ತನಿಖಾ ಸಂಸ್ಥೆಯ ಗೊಂದಲ

ಮಂಗಳೂರು: 2022ರ ನ.19ರಂದು ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳಾದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಭಿನ್ನ ಆರೋಪ ಪಟ್ಟಿ ಗೊಂದಲ ಸೃಷ್ಟಿಸಿದೆ.

ಎನ್‌ಐಎ ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸ್ಫೋಟ ಸಂಚು ನಡೆದಿತ್ತು ಎಂದಿದ್ದರೆ ಇಡಿ ಧರ್ಮಸ್ಥಳ ಮಂಜುನಾಥ ದೇವಸ್ಥಾನ ಸ್ಪೋಟಿಸುವ ಸಂಚು ನಡೆಸಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸುವ ಮೂಲಕ ಪ್ರಕರಣ ಗೊಂದಲಕ್ಕೆ ಕಾರಣವಾಗಿದೆ

2022ರ ನವೆಂಬರ್ 19ರಂದು ರಿಕ್ಷಾದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಎನ್‌ಐಎ ತನಿಖೆ ವೇಳೆ ಕದ್ರಿ ಮಂಜುನಾಥ ದೇಗುಲದ ಬಳಿ ಸ್ಫೋಟ ನಡೆಸುವ ಮೂಲಕ ಕೋಮುದ್ವೇಷ ಹಬ್ಬಿಸಲು ಐಸಿಸ್ ಸಂಚು ರೂಪಿಸಿತ್ತು ಎಂಬುದು ಬೆಳಕಿಗೆ ಬಂದಿತ್ತು. ಜೊತೆಗೆ ಪ್ರೆಷರ ಕುಕ್ಕರ್ ಬಾಂಬ್ ಟೈಮರ್ ಅನ್ನು 90 ನಿಮಿಷಕ್ಕೆ ಸೆಟ್ ಮಾಡುವ ಬದಲು 9 ಸೆಕೆಂಡ್‌ಗೆ ತಪ್ಪಾಗಿ ಸೆಟ್ ಮಾಡಿದ್ದ ಕಾರಣ ಅದು ದೇಗುಲದ ಬಳಿ ತೆರಳುವ ಮೊದಲೇ ರಿಕ್ಷದಲ್ಲಿಯೇ ಸ್ಫೋಟಗೊಂಡಿತ್ತು. ಈ ಕುರಿತು ಎನ್‌ಐಎ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು.

ಇದೇ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇ.ಡಿ ಕೂಡಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು. ಪ್ರಕರಣ ಸಂಬಂಧ ಆರೋಪಿಗಳ ಖಾತೆಯಿಂದ 29176 ರೂ. ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಬುಧವಾರ ಮಾಹಿತಿ ನೀಡಿತ್ತು. ಜೊತೆಗೆ ಈ ಮಾಹಿತಿಯಲ್ಲಿ ಕದ್ರಿ ಮಂಜುನಾಥ ದೇಗುಲದ ಬಳಿ ಸ್ಫೋಟ ಎಂದು ನಮೂದಿಸುವ ಬದಲು ಅದು ಧರ್ಮಸ್ಥಳ ಮಂಜುನಾಥ ಎಂದು ನಮೂದಿಸಿರುವ ಕಾರಣ, ಗೊಂದಲ ಉಂಟಾಗಿದೆ.

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಕದ್ರಿ ಮಂಜುನಾಥ ದೇವಾಲಯ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು’ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಆದರೆ ಇ.ಡಿ ‘ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು’ ಎಂದಿದೆ. ಎರಡೂ ತನಿಖಾ ಸಂಸ್ಥೆಗಳ ವಿವರಗಳಲ್ಲಿನ ವ್ಯತ್ಯಾಸ ಚರ್ಚೆಗೆ ಕಾರಣವಾಗಿದೆ.

ಜತೆಗೆ, ‘ಪ್ರೇಮರಾಜ್ ಎಂದು ಹೆಸರು ಬದಲಿಸಿದ್ದ ಶಾರಿಕ್ ಚಿಕ್ಕಬಳ್ಳಾಪುರದ ಇಶಾ ಫೌಂಡೇಷನ್, ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆ, ವೆಲ್ಲೂರಿನ ದೇವಾಲಯ ಮತ್ತು ಕದ್ರಿಯ ಮಂಜುನಾಥ ದೇವಾಲಯಕ್ಕೂ ಭೇಟಿ ನೀಡಿದ್ದ ಎಂದು ವಿವರಿಸಿತ್ತು.

ಕೇಂದ್ರದ ಎರಡು ತನಿಖಾ ಸಂಸ್ಥೆಗಳು ಒಂದೇ ಪ್ರಕರಣದ ವಿಚಾರದಲ್ಲಿ ಎರಡು ಭಿನ್ನ ದೇವಾಲಯಗಳ ಹೆಸರನ್ನು ಏಕೆ ಉಲ್ಲೇಖಿಸಿವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article