
ಎಸ್‌ಐಟಿಗೆ ಪೂರ್ಣ ಅಧಿಕಾರ
ಮಂಗಳೂರು: ಧರ್ಮಸ್ಥಳದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಕೆ ರಾಜ್ಯ ಸರಕಾರ ಪೂರ್ಣ ಅಧಿಕಾರ ನೀಡಿದೆ. ಎಫ್‌ಐಆರ್ ದಾಖಲಿಸಿಕೊಳ್ಳುವುದು ಮತ್ತು ಪ್ರಕರಣ ಸಂಬಂಧಿಸಿ ಬಂಧನ, ವಶಕ್ಕೆ ಪಡೆಯುವುದು, ಕೋರ್ಟಿಗೆ ಪ್ರಥಮ ವರ್ತಮಾನ ವರದಿಗಳನ್ನು ಸಲ್ಲಿಸುವುದು, ಚಾರ್ಜ್ ಶೀಟ್ ಸಲ್ಲಿಸುವುದು ಇತ್ಯಾದಿ ಅಧಿಕಾರಗಳನ್ನು ನೀಡುವುದಕ್ಕಾಗಿ ವಿಶೇಷ ತನಿಖಾ ತಂಡಕ್ಕೆ ಪೊಲೀಸ್ ಠಾಣೆಗಿರುವ ಎಲ್ಲ ಅಧಿಕಾರವನ್ನು ನೀಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಗಿರುವ ಹೆಚ್ಚುವರಿ ಅಧಿಕಾರ ನೀಡಿ ಆದೇಶಿಸಲಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ವಿಶೇಷ ತನಿಖಾ ತಂಡವನ್ನು ಪೊಲೀಸ್ ಠಾಣೆ ಎಂದೂ, ಈ ವಿಶೇಷ ತಂಡಕ್ಕೆ ನೇಮಿಸಲಾದ ಪೊಲೀಸ್ ನಿರೀಕ್ಷಕರ ದರ್ಜೆಯ/ ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ಬಿಎನ್‌ಎಸ್ 2023ರ ಕಲಂ 2(1)ರಡಿ ಪ್ರದತ್ತ ಅಧಿಕಾರದನ್ವಯ ಠಾಣಾಧಿಕಾರಿಯೆಂದು ಘೋಷಿಸಲಾಗಿದೆ. ವಿಶೇಷ ತನಿಖಾ ತಂಡವು ಪೊಲೀಸ್ ಠಾಣೆಗೆ ಪ್ರದತ್ತ ತನಿಖಾ ಕ್ರಮಗಳನ್ನು ಅನುಸರಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಅಧಿಸೂಚಿಸಿದೆ.