ಅಡಕೆಗೆ ಹಳದಿ ರೋಗ: ಕೃಷಿ ಸಚಿವರಿಂದ ಪರಿಹಾರದ ಭರವಸೆ
ಸಂಸತ್ ಅಧಿವೇಶನ ಮುಗಿಸಿ ಮಂಗಳೂರಿಗೆ ಆಗಮಿಸಿದ ಸಂಸದ ಕ್ಯಾ.ಚೌಟ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಬೆಳೆ ಹಾಗೂ ಬೆಳೆಗಾರರ ಸಮಸ್ಯೆ ಕುರಿತು ಅಡಕೆ ಬೆಳೆಯುವ ಪ್ರದೇಶಗಳ ಸಂಸದರು ಹಾಗೂ ಅಡಕೆಗೆ ಸಂಬಂಧಿಸಿದ ಸಂಸ್ಥೆಗಳ ಮುಖಂಡರೊಂದಿಗೆ ಕೇಂದ್ರ ಕೃಷಿ ಸಚಿವರ ಜತೆ ಮಹತ್ವದ ಸಭೆ ನಡೆಸಲಾಯಿತು. ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎನ್ನುವುದರ ಕುರಿತು ಏಮ್ಸ್ ಮತ್ತು ಐಸಿಎಆರ್ ಸಂಶೋಧನೆ ನಡೆಸುತ್ತಿದ್ದು, ಶೀಘ್ರಗತಿಯಲ್ಲಿ ಸಂಶೋಧನೆ ಮುಗಿಸುವಂತೆ ಮನವಿ ಮಾಡಲಾಯಿತು. ಅಲ್ಲದೆ, ಹಳದಿ ಬೆಳೆ ವ್ಯಾಪಿಸಿದ ಪ್ರದೇಶಗಳ ಬೆಳೆಗಾರರಿಗೆ ಏಕ ಗಂಟಿನ ಪರಿಹಾರ ಒದಗಿಸುವುದು, ಅಂತಹ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಕ್ರಿಯಾ ಯೋಜನೆ ರೂಪಿಸುವುದು ಇತ್ಯಾದಿಗಳ ಕುರಿತು ಗಮನ ಸೆಳೆಯಲಾಯಿತು ಎಂದರು.
ರಾಜ್ಯ ಅದಿರು ಒದಗಿಸಲಿ..:
ಕುದುರೆಮುಖದಲ್ಲಿ ಗಣಿಗಾರಿಕೆ ಬಂದ್ ಆದ ಬಳಿಕ ಕೆಐಒಸಿಎಲ್ ಕಾರ್ಖಾನೆ ಅದಿರಿನ ಸಮಸ್ಯೆ ಎದುರಿಸುತ್ತಿದೆ. ಈ ಕುರಿತು ಕುದುರೆಮುಖ ಮಜ್ದೂರ್ ಸಂಘದ ನಿಯೋಗದೊಂದಿಗೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಹಣಕಾಸು ಸಚಿವ ನಿರ್ಮಲಾ ಸೀತಾರಾಮ್ ಜತೆ ಚರ್ಚೆ ನಡೆಸಿದ್ದೇವೆ. ಅದಿರು ಒದಗಿಸುವ ನಿಟ್ಟಿನಲ್ಲಿ ಕೆಐಒಸಿಎಲ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಕ್ತ ಹಣ ಸಂದಾಯ ಮಾಡಿದೆ, ರಾಜ್ಯ ಸರ್ಕಾರವು ಈ ಕಾರ್ಖಾನೆಗೆ ಅದಿರು ಒದಗಿಸಿಕೊಟ್ಟು ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು ಎಂದು ಕ್ಯಾ.ಚೌಟ ಒತ್ತಾಯಿಸಿದರು.
34 ಪ್ರಶ್ನೆಗಳು..
ಈ ಬಾರಿಯ ಸಂಸತ್ ಅಧಿವೇಶನದಲ್ಲಿ ತಾನು 34 ಪ್ರಶ್ನೆಗಳನ್ನು ಎತ್ತಿದ್ದೇನೆ. ಕರಾವಳಿಯಲ್ಲಿ ಡ್ರಗ್ಸ್ ದಂಧೆ, ಉಗ್ರವಾದದ ಚಟುವಟಿಕೆಗಳ ಕುರಿತು ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಬಂದರು ಅಭಿವೃದ್ಧಿ ದೃಷ್ಟಿಯಿಂದ ಮೆರಿಟೈಮ್ ವಿಶ್ವ ವಿದ್ಯಾನಿಲಯ ಆಗಬೇಕು ಎನ್ನುವ ಬೇಡಿಕೆ ಸಲ್ಲಿಸಿದ್ದೇನೆ. ಮಂಗಳೂರನ್ನು ಐಟಿ ಹಬ್ ಮಾಡಲು ಡೇಟಾ ಸೆಂಟರ್ ಸ್ಥಾಪನೆ ಮಾಡುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದು, ಪೂರಕ ಸ್ಪಂದನೆ ನೀಡಿದ್ದಾರೆ. ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳ ಮೂಲಕ ಭಾರತಕ್ಕೆ ಅಡಕೆ ಆಮದು ಆಗುತ್ತಿರುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಸತ್ಯ ಹೊರಬರಲಿ..:
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಸಂಸದ ಕ್ಯಾ.ಚೌಟ, ಧರ್ಮಸ್ಥಳ ಕ್ಷೇತ್ರ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರ. ಯಾವುದೋ ಪ್ರಕರಣ ಇಟ್ಟುಕೊಂಡು ಕ್ಷೇತ್ರಕ್ಕೆ ಅವಮಾನ ಮಾಡುವುದನ್ನು ಸಹಿಸಲಾಗದು. ಎಸ್‌ಐಟಿ ರಚನೆಯನ್ನು ಮೊದಲು ಸ್ವಾಗತಿಸಿದ್ದೇ ಬಿಜೆಪಿ. ಈ ಮೂಲಕ ಸತ್ಯ, ಅಸತ್ಯ ಎಲ್ಲವೂ ಹೊರಬರಲಿ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಸತೀಶ್ ಪ್ರಭು, ರಾಜಗೋಪಾಲ್ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ಮನೋಹರ ಶೆಟ್ಟಿ, ನಂದನ್ ಮಲ್ಯ, ವಸಂತ ಜೆ.ಪೂಜಾರಿ ಉಪಸ್ಥಿತರಿದ್ದರು.