ಮೂಡುಬಿದಿರೆ: ಯುವಜನರಿಗೆ ಉದ್ಯೋಗಾವಕಾಶಗಳನ್ನು ನೀಡಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಹಮ್ಮಿಕೊಂಡಿರುವ 15ನೇ ಅವೃತ್ತಿಯ ‘ಆಳ್ವಾಸ್ ಪ್ರಗತಿ-2025’ ಉದ್ಯೋಗ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಉಸ್ತುವಾರಿ ಸಚಿವರು ಉತ್ತಮ ಶಿಕ್ಷಣದಿಂದ ಉದ್ಯೋಗ ಮತ್ತು ಭವಿಷ್ಯವನ್ನು ರೂಪಿಸುವ ಮೂಲಕ ಸದೃಢ ದೇಶವನ್ನು ಕಟ್ಟಲು ಸಾಧ್ಯ. ವಿದ್ಯೆ, ಬುದ್ದಿ, ಸಂಸ್ಕೃತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ಇತರ ಜಿಲ್ಲೆಗಳಿಗಿಂತ ಮುಂದಿದೆ. ವಿದ್ಯಾರ್ಥಿಗಳು ತಮ್ಮ ಕನಸಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರಕಾರದ ಆಶಯ ಕೂಡ ಇದೇ ಆಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕಲೆ, ಕ್ರೀಡೆ ಹಾಗೂ ಉದ್ಯೋಗಾದಾರಿತ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸುತ್ತಿದೆ. ಉದ್ಯೋಗ ಮೇಳವನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವಂತ್ತಾಗಬೇಕು ಇದಕ್ಕೆ ಸರಕಾರದ ಮಟ್ಟದಲ್ಲಿ ಸಹಕಾರವನ್ನು ನೀಡುತ್ತದೆ ಎಂದು ಹೇಳಿದರು.
ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವಾಸ್ ಸಂಸ್ಥೆಯು ಪ್ರತಿ ವರ್ಷ ಉದ್ಯೋಗ ಮೇಳವನ್ನು ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸುವ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ ಎಐ ಆಧಾರಿತ ಚಾಟ್ ಬಾಟ್ ಆಫ್ ಬಿಡುಗಡೆಗೊಳಿಸಿದರು. ಮಂಗಳೂರು ವಿವಿ ಕುಲಪತಿ ಪಿ.ಎಲ್ ಧರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಸಂವಹನ ಮತ್ತು ಕೌಶಲ ಜ್ಞಾನ ಇದ್ದಾಗ ಕಂಪೆನಿಗಳು ಹುಡುಕಿಕೊಂಡು ಬರುತ್ತವೆ ಎಂದರು.
ಸನ್ಮಾನ: ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ದುಬೈ ಇದರ ಸಂಸ್ಥಾಪಕ ವಕ್ವಾಡಿ ಪ್ರವೀಣ್ ಶೆಟ್ಟಿ, ಎಕ್ಸ್ರ್ಟೈಸ್ ಕಂಪೆನಿ ಯುಎಇ ಸಿಇಒ ಕೆ.ಎಸ್ ಶೇಖ್ ಕರ್ನಿರೆ, ಬಿಗ್ ಬ್ಯಾಗ್ಸ್ ಇಂಟರ್‌ನ್ಯಾಶನಲ್ ಕಂಪೆನಿಯ ಸ್ಥಾಪಕ ರವೀಶ್ ಕಾಮತ್, ರೋಹನ್ ಕಾರ್ಪೊರೇಶನ್ ಮಂಗಳೂರು ಇದರ ಸ್ಥಾಪಕ ರೋಹನ್ ಮೊಂತೆರೊ, ನಿವಿಯಾಸ್ ಸೊಲ್ಯೂಶನ್ಸ್‌ನ ಸಿಇಒ ಸುಯೋಗ್ ಶೆಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಎಂಎಲ್‌ಸಿ ಭೋಜೇಗೌಡ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೆ. ಅಭಯಚಂದ್ರ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಚೌಟರ ಅರಮನೆಯ ಕುಲದೀಪ್ ಎಂ., ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ನಾರಾಯಣ ಪಿ.ಎಂ ಉಪಸ್ಥಿತರಿದ್ದರು.
ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿ ಆರಂಭವಾದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಇದುವರೆಗೆ ಸುಮಾರು 36 ಸಾವಿರ ಅಭ್ಯರ್ಥಿಗಳು ಉದ್ಯೋಗ ಪಡಕೊಂಡಿದ್ದಾರೆ. ಈ ಉದ್ಯೋಗ ಮೇಳ ಸಂಪೂರ್ಣ ಉಚಿತವಾಗಿರುತ್ತದೆ ಎಂದರು.
ಉಪನ್ಯಾಸಕಿ ಪ್ರಿಯಾ ಸಿಕ್ವೇರಾ ಸನ್ಮಾನಿತರ ಪರಿಚಯ ಮಾಡಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.
ಈ ಉದ್ಯೋಗಮೇಳವು ಎರಡು ದಿನಗಳ ಕಾಲ ನಡೆಯಲಿದೆ.