
ಮೂಡುಬಿದಿರೆಯಲ್ಲಿ ಶಿವರಾಮ ಕಾರಂತ ಪ್ರಶಸ್ತಿ, ಪುರಸ್ಕಾರ ಪ್ರದಾನ
ಸಾಹಿತಿಗಳಾದ ಡಾ.ಮೋಹನ್ ಕುಂಟಾರ್(ಕೃತಿ: ಅನುವಾದ ಒಲವು ನಿಲುವುಗಳು), ಡಾ. ಎಚ್.ಎಸ್. ಅನುಪಮಾ( ಬೆಡಗಿ ನೊಳಗು-ಮಹಾದೇವಿ ಅಕ್ಕ) , ಡಾ.ಸಬಿತಾ ಬನ್ನಾಡಿ(ಇದಿರು ನೋಟ) ಮತ್ತು ಡಾ. ಶ್ರೀಪಾದ ಭಟ್( ದಡವ ನೆಕ್ಕಿದ ಹೊಳೆ) ಅವರಿಗೆ ಶಿವರಾಮ ಕಾರಂತ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಸಮಾರಂಭವನ್ನು ಉದ್ಘಾಟಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಬರಗೂರು ರಾಮಚಂದ್ರಪ್ಪ, ಕಾರಂತರು ಬದುಕನ್ನು ನಂಬಿ ಬದುಕಿದವರು. ವ್ಯಕ್ತಿ ಸ್ವಾತಂತ್ಯದ ಪರಿಕಲ್ಪನೆಯನ್ನು ಪ್ರತಿಪಾಧಿಸಿದ್ದರು. ಕಾಲದೊಳಗಿದ್ದು, ಕಾಲವನ್ನು ಮೀರುವಂತದ್ದು ಕವಿಗಳಿಗೆ, ಚಲನಶೀಲರಿಗೆ ಇರಬೇಕಾದ ಗುಣ. ಕಾಲನುಸಂಧಾನವೇ ನಮ್ಮ ಬದುಕನ್ನು ನಡೆಸುವಂತದ್ದು. ವೈಚಾರಿಕ ಪ್ರಜ್ಞೆ ಏಕಮುಖಿಯಲ್ಲ. ಆದರೆ ಗುರಿ ಒಂದೇ ಆಗಿರುತ್ತದೆ. ಅದು ಬದುಕಿನ ಚಿಂತನೆಯನ್ನು ಒಳಗೊಂಡಿರುತ್ತದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದೊಡ್ಡ ವೈಚಾರಿಕ ಪರಂಪರೆಯನ್ನು ನಾವು ಕಾಣುತ್ತೇವೆ. ಆದರೆ ಇಂದು ವಿವೇಕದ ಜಾಗವನ್ನು ಅವಿವೇಕ, ಮಾನವೀಯತೆಯನ್ನು ಮತೀಯ ಹಾಗೂ ಸತ್ಯವನ್ನು ಅಸತ್ಯ ಆಕ್ರಮಿಸಿಕೊಂಡಿದೆ ಎಂದ ಅವರು ವೈಚಾರಿಕ ಪರಂಪರೆ ಮುಂದುವರೆದ ಭಾಗವಾಗಿ ಪ್ರಶಸ್ತಿ ಸಿಕ್ಕಿರುವುದು ಭಾಗ್ಯ ಎಂದರು.
ನಾಗತಿಹಳ್ಳಿ ಚಂದ್ರಶೇಖರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕಾರಂತರ ಬದುಕು ಮತ್ತು ಬರಹ ಸದಾ ಪ್ರಸ್ತುತವಾದದ್ದು ಎಂದರು.
ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಎಂ.ಬಾಹುಬಲಿ ಪ್ರಸಾದ್, ಕೆ.ಶ್ರೀಪತಿ ಭಟ್, ರಾಜರಾಂ ನಾಗರಕಟ್ಟೆ, ಡಾ.ಧನಂಜಯ್ ಕುಂಬ್ಳೆ, ಕೃಷ್ಣರಾಜ ಹೆಗ್ಡೆ, ವೇಣುಗೋಪಾಲ ಶೆಟ್ಟಿ, ಭಾನುಮತಿ ಶೀನಪ್ಪ ಉಪಸ್ಥಿತರಿದ್ದರು.