
ದೇವಾಡಿಗ ಸುಧಾರಕ ಸಂಘದಿಂದ ಆಟಿಡೊಂಜಿ ದಿನ: ಹಿರಿಯರಿಗೆ ಸನ್ಮಾನ
ಕಾರ್ಕಳ ತೆಳ್ಳಾರಿನ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ಆಟಿ ಆಚರಣೆಯ ಕುರಿತು ಮಾತನಾಡಿ, ಆಟಿ ಸಹಿತ ತುಳುನಾಡಿನ ಪ್ರಮುಖ ಆಚರಣೆಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಅರಿವು ಕಡಿಮೆಯಾಗುತ್ತಿದೆ. ಹಿರಿಯರು ತಮ್ಮ ಕಷ್ಟದ ದಿನಗಳಲ್ಲಿ ಅನುಸರಿಸಿದ ನಮ್ಮ ಪರಂಪರೆಯನ್ನು ಇಂದು ಹೆತ್ತವರೂ ಮಕ್ಕಳಿಗೆ ತಲುಪಿಸುತ್ತಿಲ್ಲ. ಆಟಿಯ ಕೂಟ, ಕೆಸರ್‌ಡೊಂಜಿ ದಿನದಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಮೂಲ ಸಂಸ್ಕೃತಿಯ ಅರಿವನ್ನು ಏಳೆಯರಲ್ಲಿ ಮೂಡಿಸುತ್ತಿರುವುದು ಅರ್ಥಪೂರ್ಣ ಎಂದು ಹೇಳಿದರು.
ಮನೆಯಲ್ಲಿ ಮಾಡಿ ತರುವ ಆಹಾರ ಪದಾಥ೯ಗಳು ಪ್ರದಶ೯ನಕ್ಕೆ ಮಾತ್ರ ಸೀಮಿತವಾಗುತ್ತಿದೆ. ಬದಲಾಗಿ ವಿವಿಧ ರೀತಿಯ ಚಟ್ನಿ ತಯಾರಿಸಲು ಕಾಡಿನಲ್ಲಿ ಸಿಗುವ ಔಷಧೀಯ ಗುಣವುಳ್ಳ ಎಲೆಗಳು, ಗೆಡ್ಡೆ ಗೆಣಸು, ಕಷಾಯ ತಯಾರಿಸಲು ಬಳಸುವ ತೊಗಟೆಗಳನ್ನು ತಂದು ಪ್ರಾತ್ಯಕ್ಷತೆ ಮಾಡಿದರೆ ಮಕ್ಕಳು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಅಲ್ಲದೆ ಪ್ರಕೃತಿ ಯನ್ನು ಮತ್ತು ಅಲ್ಲಿರುವ ಜೀವ ಜಂತುಗಳನ್ನು ಸಂರಕ್ಷಿಸ ಬೇಕೆಂಬ ಜಾಗೃತಿಯೂ ಮೂಡುತ್ತದೆ ಎಂದರು.
ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಅಧ್ಯಕ್ಷತೆ ವಹಿಸಿ, ಸಮಾಜದ ಉದ್ಧಾರ ಮತ್ತು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ನಮ್ಮ ಹಿರಿಯರು ಈ ಸಂಘವನ್ನು ಕಟ್ಟಿದ್ದಾರೆ ಆದ್ದರಿಂದ ನಾವು ಅವರ ಆಶಯಗಳಿಗೆ ಬದ್ಧರಾಗಿರಬೇಕು. ಇದೀಗ ಸರಕಾರವು ಜಾತಿ ಗಣತಿಯನ್ನು ಆರಂಭಿಸಿದ್ದು ಇದರಿಂದ ಯಾರೂ ಹಿಂದೆ ಸರಿಯದೆ ತಾವೇ ಮುಂದೆ ಬಂದು ತಮ್ಮ ಹೆಸರುಗಳನ್ನು ನಮೂದಿಸಬೇಕೆಂದು ಸಲಹೆ ನೀಡಿದ ಅವರು ಸಂಘಕ್ಕೆ ೮೦ ವರುಷ ಕಳೆದಿದೆ ಮುಂದೆ ದೇವಸ್ಥಾನದ ಬ್ರಹ್ಮಕಲಶ ಮಾಡುವ ಯೋಜನೆ ಇದ್ದು ಸಮಾಜ ಬಾಂಧವರು ಸಹಕಾರ ನೀಡುವಂತೆ ಕೋರಿದರು.
ಪಾವಂಜೆ ದೇವಾಡಿಗರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮೀ ದೇವಾಡಿಗ, ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಜ್ಯೋತಿ ಪ್ರಿಯಾ, ಬಾರ್ಕೂರು ಏಕನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜನಾರ್ಧನ ದೇವಾಡಿಗ ಮುಖ್ಯ ಅತಿಥಿಯಾಗಿದ್ದರು.
ಹಿರಿಯರಿಗೆ ಸನ್ಮಾನ:
ಸಮಾಜದ ಹಿರಿಯರಾದ ಗುಲಾಬಿ ದೇವಾಡಿಗ, ಕರಿಯ ದೇವಾಡಿಗ, ಸಂಜೀವ ಮೊಯಿಲಿ, ಅಪ್ಪಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ವೇದಿಕೆಯ ಅಧ್ಯಕ್ಷೆ ಲಲಿತಾ ಸಂಜೀವ ಮೊಯಿಲಿ, ಯುವ ವೇದಿಕೆ ಅಧ್ಯಕ್ಷ ಪ್ರೇಮ್ ಶಂಕರ್ ಬೆಟ್ಕೇರಿ ಉಪಸ್ಥಿತರಿದ್ದರು. ಲಲನ್ ಆರ್. ಶೇರಿಗಾರ್ ಸ್ವಾಗತಿಸಿ, ರಮಾ ಪದ್ಮಾನಾಭ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾ ಸುಧೀಶ್ ದೇವಾಡಿಗ, ಧರ್ಮವೀರ ಎಸ್.ಮೊಯಿಲಿ, ರಂಜಿತ್ ಕೆಸರುಗದ್ದೆ, ಮೈತ್ರಿ ಸನ್ಮಾನಿತರನ್ನು ಪರಿಚಯಿಸಿದರು. ಮಲ್ಲಿಕಾ ಪುರಂದರ ದೇವಾಡಿಗ ವಂದಿಸಿದರು.