
ಗ್ರಂಥಾಲಯ ಶಿಕ್ಷಣ ವ್ಯವಸ್ಥೆಯ ‘ಹೃದಯ’: ನೇಮಿಚಂದ್ರ ಗೌಡ
Wednesday, August 13, 2025
ಪುತ್ತೂರು: ತಲೆ ತಗ್ಗಿಸಿ ಪುಸ್ತಕ ಓದಿದರೆ ಅದು ನಮ್ಮನ್ನು ತಲೆ ಎತ್ತಿನಿಲ್ಲುವಂತೆ ಮಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪುಸ್ತಕಪ್ರೀತಿಯನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಗ್ರಂಥಾಲಯಕ್ಕೆ ಭೇಟಿ ಕೊಡುವ ಪ್ರಕ್ರಿಯೆ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕಾಗಿದೆ. ಗ್ರಂಥಾಲಯ ಶಿಕ್ಷಣ ವ್ಯವಸ್ಥೆಯ ಹೃದಯ ಎಂದು ಐಕಳ ಪಾಂಪೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ನೇಮಿಚಂದ್ರ ಗೌಡ ಹೇಳಿದರು.
ಸಂತಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಹಾಗೂ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತದ ಗ್ರಂಥಾಲಯಕ್ಕೆ ಡಾ. ಎಸ್.ಆರ್. ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದ ಅವರು ಪುಸ್ತಕ ಓದು ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆದರೆ ಮೊಬೈಲ್ ಪ್ರೀತಿ ನಮ್ಮನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಓದಿಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ ಮಾತನಾಡಿ, ಓದುವ ಹವ್ಯಾಸ ನಮ್ಮನ್ನು ನಿರಂತರವಾಗಿ ಬೆಳೆಸುತ್ತದೆ. ಬದುಕಲು ಕಲಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿಯೂ ಗ್ರಂಥಾಲಯಗಳನ್ನು ಮಾಡುವ ಮೂಲಕ ಮನೆ ಮಕ್ಕಳಲ್ಲಿ ಓದುವ ಚಿಂತನೆ ಹುಟ್ಟುಹಾಕಬೇಕು ಎಂದರು.
ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಾದ ಅಪರ್ಣ ಎಸ್. ಮತ್ತು ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಗ್ರಂಥಪಾಲಕ ಅಬ್ದುಲ್ ರೆಹಮಾನ್ ಜಿ. ಸ್ವಾಗತಿಸಿದರು. ಪಿಜಿ ವಿಭಾಗದ ಗ್ರಂಥಪಾಲಕ ಮನೋಹರ್ ಎಸ್.ಜಿ. ವಂದಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ, ಗ್ರಂಥಾಲಯ ಸಿಬ್ಬಂದಿಗಳಾದ ಜೀಟಾ ನೊರೋನ್ಹಾ, ಕ್ಯಾಥರಿನ್ ಕ್ರಾಸ್ತಾ, ಐಕ್ಯೂಎಸಿ ಸಂಯೋಜಕರಾದ ಡಾ. ಎಡ್ವಿನ್ ಡಿ’ಸೋಜಾ, ಹರ್ಷಿತಾ ಪಿ.ವಿ ಮತ್ತು ಭರತ್ ಕುಮಾರ್ ಉಪಸ್ಥಿತರಿದ್ದರು.