ದೇವಳದಿಂದ ಕಳವು-ಆರೋಪಿಗೆ ಶಿಕ್ಷೆ
ಪುತ್ತೂರು: 4 ವರ್ಷಗಳ ಹಿಂದೆ ಇರ್ದೆ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದಿಂದ ಕಳವು ಪ್ರಕರಣದ ಆರೋಪಿಗೆ ಪುತ್ತೂರು ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಚಿಕ್ಕಮುಡ್ನೂರು ಗ್ರಾಮ ನಿವಾಸಿ ಮಹಮ್ಮದ್ ಸಲಾಂ ಆರೋಪಿ. 2021ರ ಏ.24ರಂದು ಇರ್ದೆ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ೩ ಕಾಣಿಕೆ ಡಬ್ಬಿ, ಕಚೇರಿಯಲ್ಲಿದ್ದ ಸಿಸಿ ಕ್ಯಾಮರಾ, ಎನ್‌ವಿಆರ್, ಹಾರ್ಡ್‌ಡಿಸ್ಕ್, ಸಿಸಿಟಿವಿ ಮಾನಿಟರ್ ಮತ್ತು ಪಿವೈ ಸ್ವಿಚ್ ಹಾಗೂ 3 ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ರೂ. 10 ಸಾವಿರ ನಗದು ಸಹಿತ ಒಟ್ಟು ರೂ.49,500 ಮೌಲ್ಯದ ಸೊತ್ತು ಕಳವಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರ್ಕಾರಿ ಅಭಿಯೋಜಿ ಚೇತನಾ ಅವರು ವಾದಿಸಿದ್ದರು.