ಸುಳ್ಯ ನಗರ ಪಂಚಾಯತ್ ಮುಂಭಾಗದ ಕಸ ತೆರವು ಕಾರ್ಯಾಚರಣೆಗೆ ವೇಗ-60 ಟನ್‌ಗಿಂಲೂ ಅಧಿಕ ಕಸ ಸಾಗಾಟ: ಇನ್ನೂ ಉಳಿದಿದೆ ಕಸದ ರಾಶಿ..!
60 ಟನ್‌ಗಿಂತಲೂ ಅಧಿಕ ಕಸವನ್ನು ಈಗಾಗಲೇ ಸಾಗಾಟ ಮಾಡಲಾಗಿದ್ದು ಇನ್ನೂ ಸುಮಾರು 30 ಟನ್‌ಗಿಂತಲೂ ಅಧಿಕ ಕಸ ಸಂಗ್ರಹ ಇದೆ.ಇದನ್ನು ಕೂಡ ಕೂಡಲೇ ತೆರವು ಮಾಡಲು ಯೋಜನೆ ರೂಪಿಸಲಾಗಿದೆ.ಗ್ರೀನ್ ಸ್ಪೇಸ್ ಸೊಲ್ಯೂಷನ್ ಎಂಬ ಕಂಪೆನಿ ಕಸವನ್ನು ಮೈಸೂರು ಹಾಗೂ ಬೆಳಗಾವಿಗೆ ಸಾಗಿಸುತ್ತಾರೆ. ಮರುಬಳಕೆಯ ಕಸವನ್ನು ಬೇರ್ಪಡಿಸಿ ಉಳಿದವುಗಳನ್ನು ಸಿಮೆಂಟ್ ಫ್ಯಾಕ್ಟರಿಗೆ ಕೊಡಲಾಗುತ್ತದೆ. ಈ ಹಿಂದೆಯೂ ಸುಳ್ಯ ನಗರ ಮುಂಭಾಗದ ಕಸವನ್ನು ಗ್ರೀನ್ ಸ್ಪೇಸ್ ಸೊಲ್ಯೂಷನ್ ಕಂಪೆನಿಯೇ ಸಾಗಾಟ ಮಾಡಿತ್ತು.
ಕೆಲವು ವರ್ಷಗಳ ಹಿಂದೆ ಇದೇ ರೀತಿ ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿ ಮತ್ತು ಸುತ್ತ ಕಸ ತುಂಬಿಟ್ಟದ್ದು ಭಾರೀ ವಿವಾದ ಸೃಷ್ಠಿಸಿತ್ತು. ಬಳಿಕ ಆಗಿನ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನೇತೃತ್ವದಲ್ಲಿ ಕಸವನ್ನು ತೆರವು ಮಾಡಲಾಗಿತ್ತು. ಬಳಿಕ ಆ ಆಡಳಿತ ಮಂಡಳಿ ಅವಧಿ ಮುಗಿದ ಬಳಿಕ ಕಲ್ಚರ್ಪೆಯಲ್ಲಿ ಸ್ಥಳದ ಕೊರತೆ ಮತ್ತು ಬರ್ನಿಂಗ್ ಮಷಿನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಸ ಉರಿಯದ ಕಾರಣ ಮತ್ತೆ ನಗರ ಪಂಚಾಯತ್ ಎದುರಿನ ಕಟ್ಟಡದಲ್ಲಿ ಕಸ ತುಂಬಿಡಲು ಆರಂಭಿಸಿತ್ತು. ಇಲ್ಲಿ ಮತ್ತೆ ಕಸದ ರಾಶಿ ತುಂಬಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕಸ ಸಾಗಿಸಲು ನಗರ ಪಂಚಾಯತ್ ಮುಂದಾಗಿದೆ. ನಿನ್ನೆ ದಿನ ಎರಡು ಬೃಹತ್ ಲಾರಿಗಳಲ್ಲಿ ಕಸವನ್ನು ಸಾಗಾಟ ಮಾಡಲಾಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ಸದಸ್ಯರಾದ, ಕೆ.ಎಸ್.ಉಮ್ಮರ್, ಶೀಲಾ ಅರುಣ ಕುರುಂಜಿ,ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ, ಪ್ರಮುಖರಾದ ಸುಪ್ರೀತ್ ಮೋಂಟಡ್ಕ, ಅಬೂಬಕ್ಕರ್ ಅಡ್ಕಾರ್, ಗ್ರೀನ್ ಸ್ಪೇಸ್ ಸೊಲ್ಯೂಷನ್ ಕಂಪೆನಿಯ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.
