ಅಪಘಾತ: ಡಿಜೆ ಮರ್ವಿನ್ ಸಾವು
ಉಡುಪಿ: ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ಕಾರು ಪಲ್ಟಿಯಾಗಿ ಓರ್ವ ಪ್ರಯಾಣಿಕ ಸಾವನಪ್ಪಿದ್ದು ಮೂವರು ಗಂಭೀರ ಗಾಯಗೊಂಡ ಘಟನೆ ಕಾಪು ಠಾಣೆ ವ್ಯಾಪ್ತಿಯ ಮೂಳೂರು ಸಮೀಪದ ಹಳ್ಳಿ ಮನೆ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.
ಮೃತರನ್ನು ಬೆಳ್ಮಣ್ ನಿವಾಸಿ ಮರ್ವಿನ್ ಮೆಂಡೋನ್ಸಾ ಎಂದು ಗುರುತಿಸಲಾಗಿದೆ. ಸಿನಿಮಾ ಛಾಯಾಗ್ರಹಣ ಮಾಡುತ್ತಿದ್ದ ಮರ್ವಿನ್ ಡಿಜೆ ಸೌಂಡ್ಸ್ ವೃತ್ತಿಯನ್ನೂ ಮಾಡುತ್ತಿದ್ದರು. ಕಾರು ಚಾಲಕ ಅಂಬಲಪಾಡಿಯ ಪ್ರಜ್ವಲ್, ಕಾರ್ಕಳದ ಪ್ರಸಾದ್ ಮತ್ತು ವಿಘ್ನೇಶ್ ಗಾಯಗೊಂಡಿದ್ದು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕಾರಿನಲ್ಲಿ ಅಂಬಲಪಾಡಿಯಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದಾಗ ಘಟನೆ ನಡೆದಿದ್ದು ನಾಯಿ ಅಡ್ಡ ಬಂತೆಂದು ದಿಢೀರ್ ಬ್ರೇಕ್ ತುಳಿದು ಪಲ್ಟಿಯಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದರಿಂದ ಒಳಗಿದ್ದವರು ತೀವ್ರ ಗಾಯಗೊಂಡಿದ್ದಾರೆ.
ಒಂದು ದಿನ ಹಿಂದಷ್ಟೇ ಮರ್ವಿನ್ ಅವರು ತಮ್ಮ ಹೊಸ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದರು. ಅದನ್ನು ಅವರು ಎಪಿಡಿ ಮ್ಯೂಸಿಕ್ಗಾಗಿ ನಿರ್ಮಿಸಿ ಸ್ವತಃ ಚಿತ್ರೀಕರಣ ಮಾಡಿದ್ದರು. ಛಾಯಾಗ್ರಾಹಕರಾಗಿ ಹಲವಾರು ಕೊಂಕಣಿ ಮತ್ತು ತುಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.