
ಧರ್ಮಸ್ಥಳ ಭೂಲೋಕದ ಸ್ವರ್ಗ: ವಿವೇಕ್ ವಿ. ಪ್ಯಾಸ್
Wednesday, September 17, 2025
ಧರ್ಮಸ್ಥಳ: ಭಜನಾ ತರಬೇತಿ ಎಂಬುದು ಒಂದು ರೀತಿಯ ದೀಕ್ಷೆ ಎಂದು ಬೆಳ್ತಂಗಡಿಯ ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪ್ಯಾಸ್ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ೪ನೇ ದಿನದ ಕಾರ್ಯಾಗಾರದಲ್ಲಿ ‘ಆರೋಗ್ಯಕರ ಅಭ್ಯಾಸಗಳು ಜನಜಾಗೃತಿ ಚಲನಚಿತ್ರ ಪ್ರದರ್ಶನ’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.
ಬದುಕಿನ ಬದಲಾವಣೆಗೆ ಅವಕಾಶ ಮಾಡಿಕೊಡಬಲ್ಲ ಶಕ್ತಿ ಈ ಭಜನಾ ಕಮ್ಮಟಕ್ಕಿದೆ ಹಾಗಾಗಿ ಈ ಮಹೋತ್ಸವ ಸಭಾಭವನವು ಇಂದು ಅಧಿಕೃತ ಶಾಲೆಯಾಗಿ ಮಾರ್ಪಾಡುಗೊಂಡು ಭಜಕರಿಗೆ ಬದುಕಿನ ಪಾಠವನ್ನು ಕಲಿಸುತ್ತಿದೆ. ಸಂಸ್ಕೃತಿ ಸಂಸ್ಕಾರದ ಬಿತ್ತನೆಗೆ ಇದೊಂದು ಉತ್ತಮ ಬುನಾದಿ ಎಂದು ಹೇಳಿದರು.
ಆರೋಗ್ಯಕರ ದೇಹವೆಂಬುದು ಆತ್ಮದ ಅರಮನೆ ಇದ್ದಂತೆ ಅದನ್ನು ಸಮತೋಲನದಲ್ಲಿ ಇರಿಸಲು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ರಚನಾತ್ಮಕವಾಗಿರಿಸಬೇಕು.ನಮ್ಮ ಆಹಾರದ ಗುಣಗಳು ಬದಲಾದಂತೆ ವರ್ತನೆಗಳು ಅದರ ಮೇಲೆ ಅವಲಂಬಿತಗೊಂಡಿರುತ್ತವೆ, ಆಹಾರದಿಂದ ನಮ್ಮ ಗುಣ ನಿರ್ಧರಿತವಾಗುತ್ತದೆ. ಪ್ರಾಣಿ ಪಕ್ಷಿಗಳು ತಮಗೆ ಬೇಕಾದ ಆಹಾರವನ್ನಲ್ಲದೆ ಬೇರೆ ಯಾವುದನ್ನೂ ಅವು ಸೇವಿಸುವುದಿಲ್ಲ ಅಂತೆಯೇ ನಮ್ಮ ದೇಹಕ್ಕೆ ಪೂರಕವಾದ ಆಹಾರವನ್ನು ಮಾತ್ರ ನಾವು ಸೇವಿಸಬೇಕು, ಅದಲ್ಲದೇ ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗಿ ಮಾನವ ಜೀವನದ ಮಹತ್ವವನ್ನು ಕಳೆದುಕೊಳ್ಳಬಾರದೆಂದು ಅಭಿಪ್ರಾಯಪಟ್ಟರು.
ನಮ್ಮನ್ನು ಡ್ರಿಂಕ್ಸ್, ಡೈನ್, ಡೈ, ಮತ್ತು ಡ್ಯಾನ್ಸ್ ಎಂಬ ೪ಡಿ ಗಳು ಅತಿಯಾಗಿ ಆಕರ್ಷಿಸುತ್ತಿದೆ.ಅದರಿಂದ ನಾವಿಂದು ತಿಂದು, ಕುಡಿದು, ಸಾಯುತ್ತಿದ್ದೇವೆ, ಅಲ್ಲದೇ ಬದುಕನ್ನು ಬದುಕುವಲ್ಲಿ ಸೋಲುತ್ತಿದ್ದೇವೆ. ಸರ್ಪಗಳ ಹೆಡೆಯಲ್ಲಿ ವಿಷವಿದ್ದರೆ, ವ್ಯಸನಿಗಳ ದೇಹವೇ ವಿಷಪೂರಿತಗೊಂಡು ತಮ್ಮ ದೇಹವನ್ನು ತಾವೇ ಕ್ಷೀಣಿಸಿಕೊಳ್ಳುವಂತೆ ಮಾಡುತ್ತಿದೆ. ಹಾಗಾಗಿ ಇಂದು ನಮ್ಮ ದುರಾದೃಷ್ಟಕ್ಕೆ ಭಾರತ ವಿಶ್ವದಲ್ಲಿ ಮದ್ಯಪಾನ ಸೇವನೆಯಲ್ಲಿ ಪ್ರಥಮ ಸ್ಥಾನ, ಧೂಮಪಾನ ವ್ಯಸನದಲ್ಲಿ ಎರಡನೇ ಸ್ಥಾನ, ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ. ಇದರ ಬದಲಾವಣೆ ಮಾಡಲು ಶ್ರೀ ಕ್ಷೇತ್ರ ಹಲವು ಪುಣ್ಯ ಕಾರ್ಯಗಳನ್ನು ಮಾಡುತ್ತಾ ಯಶಸ್ಸನ್ನು ಕಾಣುತ್ತಿದೆ. ಅಲ್ಲದೆ ಹಲವರ ಬದುಕನ್ನು ಕಟ್ಟಿಕೊಟ್ಟು ಭೂಲೋಕದ ಸ್ವರ್ಗ ಎಂದೆನಿಸಿಕೊಂಡಿದೆ ಎಂದು ಹೇಳಿದರು.
ಶರೀರವೆಂಬುದು ಕಾರ್ಖಾನೆ ಇದ್ದಂತೆ ನಾವೇನು ಕ್ರಿಯೆಗಳನ್ನು ಸೂಚಿಸುತ್ತೇವೋ ಅದು ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುತ್ತದೆ. ಬದುಕು ಬಂಗಾರವಾಗಲು ಬಣ್ಣ, ಅಂದ-ಚೆಂದ, ಹಣ, ಜಾತಿ ಯಾವುದು ಮುಖ್ಯವಲ್ಲ ಬುದ್ಧಿವಂತಿಕೆಯಿಂದ ಮಾತ್ರ ಸಾಧ್ಯ. ಆ ಬುದ್ಧಿವಂತಿಕೆ ಬಳಸಿ ಬದುಕಿನ ಸವಾಲುಗಳನ್ನು ಎದುರಿಸಿ ಬದುಕಲು ಆಧ್ಯಾತ್ಮಿಕ ಕಾರ್ಯಗಳು ದಾರಿದೀಪವಾಗುತ್ತದೆ ಎಂದರು.