
ಕಟೀಲು ದೇಗುಲದಲ್ಲಿ ಸೇವಾದರ ಏರಿಕೆ ಅನಿವಾರ್ಯ: ಆಡಳಿತ ಮಂಡಳಿ ಹೇಳಿಕೆ
ಅವರು ಕಟೀಲು ದೇಗುಲದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಸೇವಾದರಗಳಲಿ ಏರಿಕೆಯ ಕುರಿತು ಮಾಹಿತಿ ನೀಡಿದರು.
ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, 2017ರಲ್ಲಿ ಸೇವಾದರಗಳ ಏರಿಕೆ ಆಗಿದ್ದು, ಮೂರು ವರುಷಗಳಿಗೊಮ್ಮೆ ಏರಿಕೆ ಮಾಡುವ ಹಕ್ಕು ಮತ್ತು ಜವಾಬ್ದಾರಿ ದೇವಸ್ಥಾನಕ್ಕೆ ಇದ್ದರೂ ಭಕ್ತರಿಗೆ ತೊಂದರೆ ಆಗಬಾರದು ಎಂದು ಏರಿಕೆ ಮಾಡಿರಲಿಲ್ಲ. ಆದರೆ ಎಂಟು ವರುಷಗಳ ಬಳಿಕ ದರ ಏರಿಕೆ ಅನಿವಾರ‍್ಯವಾಗಿರುವುದರಿಂದ ಈ ನಿರ್ಧಾರ ಮಾಡಿದ್ದೇವೆ. ದರ ಹೆಚ್ಚಿಸುವ ಮೊದಲು ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಆಯುಕ್ತರ ಸೂಚನಾ ಫಲಕ ಸೇರಿದಂತೆ ಸ್ಥಳೀಯ ಸೂಚನಾಫಲಕಗಳಲ್ಲಿ ಮಾಹಿತಿ ನೀಡಿದ್ದರೂ ಯಾರೂ ಆಕ್ಷೇಪ ಮಾಡಿಲ್ಲ. ಹಿಂದೂ ದೇವಸ್ಥಾನಗಳ ವಿರುದ್ಧ ಷಡ್ಯಂತ್ರ ಮಾಡುವವರು, ಹಿಂದೂ ದೇವಸ್ಥಾನಗಳ ಅಭಿವೃದ್ಧಿ ಆಗಬಾರದು, ಇಲ್ಲಿ ಹಿಂದೂಗಳು ಸೇವೆ ಸಲ್ಲಿಸಬಾರದು ಎಂಬ ಮನಸ್ಥಿತಿಯ ಮಂದಿ ಸೇವಾದರದ ನೆಪ ಮಾಡಿ ಕ್ಷೇತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
2027ರಲ್ಲಿ ತೆಂಗಿನ ಕಾಯಿಗೆ 12ರೂ. ಇತ್ತು ಈಗ ಅದು 33.50ರೂ. ಆಗಿದೆ. ಸೋನಾ ಮಸೂರಿ ಅಕ್ಕಿಗೆ ಕಿಲೋಗೆ ರೂ. 30 ಇತ್ತು ಈಗ 50.95ರೂ. ಆಗಿದೆ. ಅರಳುಬ ಹುಡಿ 43 ರೂ. ಇದ್ದುದು 99ರೂ. ಆಗಿದೆ. ಗ್ಯಾಸ್‌ಗೆ ರೂ. 1410 ಇದ್ದುದು 1850, ತೆಂಗಿನ ಎಣ್ಣೆಗೆ 103 ಇದ್ದುದು 385ರೂ. ತೆಂಗಿನಕಾಯಿ ಹುಡಿಗೆ ರೂ 120 ಇದ್ದುದು 360ರೂ., ಸಕ್ಕರೆಗೆ ರೂ. 32ಇದ್ದುದು 42ರೂ. ಬಿಳಿ ಎಳ್ಳು ರೂ. 90 ಇದ್ದುದು 165ರೂ. ಅವಲಕ್ಕಿ ರೂ.24 ಇದ್ದುದು 51.80, ಗಂಧದ ಉಂಡೆ 50ರೂ. ಇದ್ದುದು 124ರೂ. ಹೆಸರು ಬೇಳದ ರೂ. 69 ಇದ್ದುದು 103 ರೂ. ಹೀಗೆ ನಾನಾ ಸಾಮಾಗ್ರಿಗಳ ಬೆಲೆ ವಿಪರೀತ ಏರಿಕೆ ಆಗಿದೆ.
2016ರಲ್ಲಿ ಅನ್ನದಾನಕ್ಕೆ ರೂ. 2 ಕೋಟಿ 18 ಲಕ್ಷ ಖರ್ಚಾಗಿದ್ದರೆ ಈ ವರ್ಷ 5 ಕೋಟಿ 41 ಲಕ್ಷ ಖರ್ಚಾಗಿದೆ. ದೇವಳದ ಖರ್ಚು 19 ಕೋಟಿ ಇದ್ದರೆ ಈಗ ರೂ. 32 ಕೋಟಿ ಆಗಿದೆ. ಆದಾಯ 24 ಕೋಟಿ ರೂ.ಇದ್ದು ಈಗ 32 ಕೋಟಿ ರೂ. ಆಗಿದೆ. ವಿದ್ಯುತ್ ಬಿಲ್, ಡಿಸೀಲ್ ದರ ಇತ್ಯಾದಿಗಳಲ್ಲಿ ವಿಪರೀತ ಏರಿಕೆಯಾಗಿದೆ. ದೇವಳದ ಸಿಬಂದಿಗೆ ಇದ್ದ ಗರಿಷ್ಟ ವೇತನ 32 ಸಾವಿರ ರೂಪಾಯಿ ಇದ್ದುದು ರೂ. 81 ಸಾವಿರವಾಗಿದೆ. ದೇವಳದ ಹೊರ ನೌಕರರ ಸಂಖ್ಯೆ 128ರಿಂದ 173ಕ್ಕೆ ಏರಿದೆ. ಶಿಕ್ಷಣ ಸಂಸ್ಥೆಗಳಲ್ಲಿ 129 ಮಂದಿ ಇದ್ದಾರೆ. ಇಲ್ಲಿನ ಶಿಕ್ಷಕರ ಗರಿಷ್ಟ ವೇತನ 60ಸಾವಿರದಿಂದ ರೂ. 157 ಲಕ್ಷವಾಗಿದೆ. ಶಾಲೆಯ ಗ್ರೂಪ್ ಡಿ ನೌಕರರ ಗರಿಷ್ಟ ವೇತನ 27 ಸಾವಿರದಿಂದ ರೂ. 69 ಸಾವಿರಕ್ಕೇರಿದೆ.
ಬೆಳಕಿನ ವ್ಯವಸ್ಥೆಗೆ 19 ಲಕ್ಷದ 85 ಸಾವಿರ ರೂ. ಇದ್ದ ಖರ್ಚು 48 ಲಕ್ಷ ರೂಪಾಯಿಗಳಿಗೆ ಹೆಚ್ಚಳವಾಗಿದೆ. ಸೇವಾ ಬಟವಾಡೆ 94 ಲಕ್ಷ ರೂಗಳಿಂದ 1 ಕೋಟಿ 15 ಲಕ್ಷ ರೂಗಳಿಗೇರಿದೆ. ಗೋಶಾಲೆಗೆ ರೂ. 1 ಕೋಟಿ 7 ಲಕ್ಷ ರೂ. ಖರ್ಚಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಚಪ್ಪಲಿ ಸ್ಟ್ಯಾಂಡ್ ಎಲ್ಲ ವ್ಯವಸ್ಥೆ ಉಚಿತವಾಗಿದೆ. ಮೂರು ಹೊತ್ತು ಅನ್ನಪ್ರಸಾದವಿದೆ. ಕಳೆದ ವರ್ಷ ಅಭಿವೃದ್ಧಿ ಕಾಮಗಾರಿಗಳಿಗೆ 2 ಕೋಟಿ 74 ಲಕ್ಷ ರೂ. ಖರ್ಚಾಗಿದೆ. ಸೆಕ್ಯೂರಿಟಿ, ಸಿಸಿಕೆಮರಾ, ಸ್ವಚ್ಛತೆ ವೆಚ್ಚಗಳೆಲ್ಲ ಮೊದಲು ಇರಲಿಲ್ಲ. ಈಗ ಇವುಗಳ ಖರ್ಚುವೆಚ್ಚಗಳ ಒತ್ತಡ ಹೆಚ್ಚಿದೆ. ಹೀಗಿರುವಾಗ ಸೇವಾದರ ಏರಿಕೆ ಅನಿವಾರ‍್ಯವಾಗಿದೆ ಎಂದು ಮಾಹಿತಿ ನೀಡಿದರು.
2024-25ರಲ್ಲಿ 5 ಲಕ್ಷದ 97ಸಾವಿರ ಹೂವಿನ ಪೂಜೆಗಳಾಗಿವೆ. ದಿನಂಪ್ರತಿ 12ರಂಗ ಪೂಜೆಗಳಾಗುತ್ತಿದ್ದು, ೨ವರ್ಷಗಳಿಗೆ ಮುಂಗಡ ಕಾದಿರಿಸಲಾಗಿದೆ. ಹೊಸದಾಗಿ ಬ್ರಹ್ಮರಗುಡಿ, ನಾಗದೇವರ ಸನ್ನಿಧಿಯಲ್ಲಿ ಹೊಸದಾಗಿ ಸೇವೆಗಳನ್ನು ಆರಂಭಿಸಲಾಗುವುದು ಎಂದು ಶ್ರೀಹರಿ ಆಸ್ರಣ್ಣ ಮಾಹಿತಿ ನೀಡಿದರು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಕೊಡೆತ್ತೂರುಗುತ್ತು ಬಿಪಿನ್‌ಚಂದ್ರ ಶೆಟ್ಟಿ ಮತ್ತಿತರರಿದ್ದರು.