ಕಾರ್ಮಿಕರ ನಶೆಯ ಜಗಳ: ಓರ್ವನ ಕೊಲೆ
Sunday, September 14, 2025
ಕುಂದಾಪುರ: ಮದ್ಯವ್ಯಸನಿಗಳಾದ ಗೆಳೆಯರಿಬ್ಬರ ನಡುವೆ ಉಂಟಾದ ಸಣ್ಣ ತಕರಾರು ಬೆಳೆದು ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ನಡೆದಿದೆ.
ಕೇರಳ ಮೂಲದ ಬಿನೋ ಫಿಲಿಪ್ (45) ಕೊಲೆಯಾದ ಕಾರ್ಮಿಕ. ಉದಯ್ ಎಂಬಾತ ಕೊಲೆ ಆರೋಪಿ ಎಂದು ತಿಳಿದುಬಂದಿದೆ.
ತೂದಳ್ಳಿ ದೇವರಗದ್ದೆ ನಿವಾಸಿ ಥೋಮಸ್ ಎನ್ನುವವರ ತೋಟದಲ್ಲಿ ಕೇರಳ ಮೂಲದ ಬಿನೊ ಹಾಗೂ ಉದಯ್ ಎನ್ನುವವರು ಕಳೆದ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮದ್ಯಪಾನ ಮಾಡಿದಾಗ ಇವರೊಳಗೆ ಆಗ್ಗಾಗೆ ಗಲಾಟೆ ನಡೆಯುತ್ತಿತ್ತು. ಶನಿವಾರ ತಡರಾತ್ರಿ ಇಬ್ಬರ ನಡುವೆ ಹೀಗೆ ನಶೆಯ ಗಲಾಟೆ ನಡೆದಿದ್ದು ಉದಯ್ ರಬ್ಬರ್ ಟ್ಯಾಪಿಂಗ್ ಚೂರಿಯಿಂದ ಬಿನೊಗೆ ಇರಿದ. ಗಂಭೀರ ಗಾಯಗೊಂಡ ಬಿನೊ ಫಿಲಿಪ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದೆ.