
ಪೂರ್ಣಾವಧಿ ಮೇಳವಾಗಿ ಗುತ್ಯಮ್ಮ ಯಕ್ಷಗಾನ ಮೇಳ: ಬೇಳೂರು ವಿಷ್ಣಮೂರ್ತಿ ನಾಯಕ್‌ರ ನೂತನ ಸಾರಥ್ಯ
ಅವರು ಬ್ರಹ್ಮಾವರದ ಗಜಾನನ ಭವನ ಹೋಟೆಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಒಂದಷ್ಟು ಯಕ್ಷಗಾನ ಪೋಷಕರ ಸಹಕಾರ ಹಾಗೂ ಮಾರ್ಗದರ್ಶನದಿಂದ ಈ ಬಾರಿ ಮೇಳದ ಯಜಮಾನನಾಗಿ ಮೇಳ ಮುನ್ನಡೆಸಲಿದ್ದೇನೆ. ಈ ಬಾರಿಯ ತಿರುಗಾಟಕ್ಕೆ ಪ್ರಸಿದ್ಧ ಕಲಾವಿದರುಗಳನ್ನು ಸೇರಿಸಿಕೊಂಡಿದ್ದೇವೆ. ಈ ವರ್ಷದ ಪ್ರದರ್ಶನಕ್ಕೆ ಎಂ.ಕೆ.ರಮೇಶ್ ಆಚಾರ್ಯರು ಬರೆದ ರಾಜಾ ಕರಂದಮ ಹಾಗೂ ಶ್ರೀ ಸೋಮವಾರ ಸಂತೆ ಕ್ಷೇತ್ರ ಮಹಾತ್ಮೆ, ಬೇಳೂರು ವಿಷ್ಣಮೂರ್ತಿ ನಾಯಕ್ ಬರೆದ ಕಲ್ಯಾಣ ದೀಪ ಯಕ್ಷಗಾನ ಪ್ರಸಂಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಎಲ್ಲಾ ಪೌರಾಣಿಕ ಪ್ರಸಂಗಗಳನ್ನೂ ಪ್ರದರ್ಶನ ಮಾಡಲಿದ್ದೇವೆ ಎಂದರು.
ಸಾಂಪ್ರದಾಯಿಕ ಯಕ್ಷಗಾನ ಕಲೆಗೆ ಎಲ್ಲಿಯೂ ಅಪಚಾರವಾಗದಂತೆ ಜಾಗ್ರತೆ ವಹಿಸಲಾಗುವುದು ಎಂಬ ಬಗ್ಗೆ ಮಾತನಾಡಿದ ನಾಯಕ್, ನಮ್ಮ ಮೇಳದ ಯಕ್ಷಗಾನ ಪ್ರದರ್ಶನದ ಸಂದರ್ಭ ಕೋಲದ ವೇಷ ಮಾಡಿಸುವುದಿಲ್ಲ. ವೇಷಧಾರಿ ದೊಂದಿ ಹಿಡಿದು ಬರುವಂತಿಲ್ಲ, ಸಭೆಯ ನಡುವಿನಿಂದ ಮಹಿಷಾಸುರ ಸೇರಿದಂತೆ ಯಾವುದೇ ವೇಷವೂ ಬರುವಂತಿಲ್ಲ ಎಂದು ಎಲ್ಲಾ ಕಲಾವಿದರಿಗೆ ಸೂಚನೆ ನೀಡಿದ್ದೇವೆ. ಯಾವುದೇ ಬೇಂಡು ಸೆಟ್‌ಗಳನ್ನು ನಾವು ಬಳಸುವುದಿಲ್ಲ. ಸಾಂಪ್ರದಾಯಿಕ ವಾದ್ಯಗಳಾದ ಚಂಡೆ, ಮದ್ದಳೆಯನ್ನು ಮಾತ್ರ ಬಳಸಿಕೊಳ್ಳಲಿದ್ದೇವೆ. ನಾವು ರಂಗಸ್ಥಳ ಹಾಗೂ ಚೌಕಿಯನ್ನು ದೇವಸ್ಥಾನವೆಂದು ಭಾವಿಸಿದ್ದೇವೆ. ಎಲ್ಲಾ ವೇಷಗಳೂ ಚೌಕಿಯಿಂದ ನೇರವಾಗಿ ರಂಗಸ್ಥಳಕ್ಕೆ ಪ್ರವೇಶ ಮಾಡಬೇಕು ಎಂಬ ನಿಬಂಧನೆ ಹಾಕಿಕೊಂಡಿದ್ದೇವೆ ಎಂದರು.
ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಮಾತನಾಡಿ, ಅತಿಥಿ ಕಲಾವಿದರಾಗಿ ಎಂ.ಕೆ.ರಮೇಶ್ ಆಚಾರ್ಯ, ನಿಟ್ಟೂರು ಸುಬ್ರಹ್ಮಣ್ಯ ಭಟ್, ಹಿರಿಯಣ್ಣ ಆಚಾರ್ಯ, ಲಂಬೋದರ ಹೆಗ್ಡೆ ನಿಟ್ಟೂರು, ಚಂದ್ರಯ್ಯ ಆಚಾರ್ಯ ಹಾಲಾಡಿ, ಶಿವಾನಂದ ಕೋಟ, ಪ್ರಸನ್ನ ಕಲ್ಲುಕೊಪ್ಪ, ರಾಘವೇಂದ್ರ ನಾಗರಕೊಡಿಗೆ, ಅಂಬರೀಶ್ ಭಾರದ್ವಾಜ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ವಡ್ಡರ್ಸೆ ಗುರುರಾಜ್ ಅಡಿಗ ಆಗುಂಬೆ, ವಡ್ಡರ್ಸೆ ನಾಗೇಂದ್ರ ಅಡಿಗ ಆಗುಂಬೆ, ಮೇಳದ ಮ್ಯಾನೇಜರ್ ಜಯಾನಂದ ಹೊಳೆಕೊಪ್ಪ ಭಾಗವಹಿಸಿದ್ದರು.