
ಸಮೀಕ್ಷೆ: ಇ-ಕೆವೈಸಿ ಕಡ್ಡಾಯ
ಮಂಗಳೂರು: ರಾಜ್ಯ ಹಿಂದುಳಿದ ವರ್ಗಗ ಆಯೋಗದ ವತಿಯಿಂದ ಸೆ. 22ರಿಂದ ಅ. 7ರವರೆಗೆ ಹಮ್ಮಿಕೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಪಡಿತರ ಚೀಟಿ ಇಲ್ಲದ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಇಲ್ಲದ ಕುಟುಂಬದ ಸದಸ್ಯರಿಗೆ ಇ-ಕೆವೈಸಿ ಕಡ್ಡಾಯ. ಅದಕ್ಕಾಗಿ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದನ್ನು ಎಲ್ಲರೂ ಖಾತರಿಪಡಿಸಿಕೊಂಡಿರಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಸಮೀಕ್ಷೆಯ ಕುರಿತಂತೆ ಶಾಸಕರು, ವಿವಿಧ ಧರ್ಮ, ಜಾತಿ, ಸಮುದಾಯಗಳ ಮುಖ್ಯಸ್ಥರನ್ನು ಒಳಗೊಂಡ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಗದಿತ ಸಮಯದಲ್ಲಿ ಸಮೀಕ್ಷೆ ನಡೆಸಲು ಆಯೋಗ ನಿರ್ಧರಿಸಿದೆ. ಸಮೀಕ್ಷೆ ಕುರಿತಂತೆ ಈಗಾಗಲೇ ಸ್ಟಿಕ್ಕರ್ ಅಂಟಿಸುವ ಮೂಲಕ ಮಾಹಿತಿ ನೀಡಲಾಗಿದೆ. ಮುಂದೆ ಸಮೀಕ್ಷೆಯ ಕುರಿತಂತೆ 60 ಪ್ರಶ್ನಾವಳಿಗಳನ್ನು ಒಳಗೊಂಡ ಫಾರಂ ಅನ್ನು ಪ್ರತಿ ಮನೆಗಳಿಗೆ ಆಶಾ ಕಾರ್ಯಕರ್ತರು ತಲುಪಿಸಲಿದ್ದಾರೆ. ಈ ಪ್ರಶ್ನಾವಳಿಗೆ ಪೂರಕವಾದ ಮಾಹಿತಿ ಯನ್ನು ಮನೆಯವರು ಸಿದ್ಧಪಡಿಸಿಕೊಂಡಿರಬೇಕು. ಬಳಿಕ ತರಬೇತು ಹೊಂದಿದ, ಆಯೋಗದಿಂದ ಅಧಿಕೃತ ಐಡಿ ಕಾರ್ಡ್ ಪಡೆದ ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಮೊಬೈಲ್ಗಳಲ್ಲಿಯೇ ಮನೆಯವರಿಂದ ಮಾಹಿತಿಯನ್ನು ಅಪ್ಲೋಡ್ ಮಾಡಿಕೊಳ್ಳುತ್ತಾರೆ.
ಈ ಸಂದರ್ಭ ಮನೆಯಲ್ಲಿ ಲಭ್ಯ ಇರುವವರು ಕುಟುಂಬದ ಸದಸ್ಯರ ಸಮಗ್ರ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು. ಈ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಮನೆಯೊಂದರ ಮಾಹಿತಿ ಸಂಗ್ರಹಿಸಲು ಗರಿಷ್ಟ 1 ಗಂಟೆಯ ಸಮಯಾವಕಾಶ ಬೇಕಿದೆ. ದಿನಕ್ಕೆ ಅವರು 10 ಮನೆ ಗಳಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಮಾಹಿತಿಗಳು ಸಿದ್ಧವಾಗಿದ್ದರೆ ಮಾಹಿತಿ ಭರ್ತಿ ಮಾಡಿಕೊಳ್ಳಲು ಸುಲಭವಾ ಗಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ಪೂರ್ವ ತಯಾರಿ ಇಲ್ಲದ ಸಮೀಕ್ಷೆ:
ಸಮೀಕ್ಷೆ ನಡೆಸುವ ಕುರಿತಂತೆ ಸಾರ್ವಜನಿಕರಿಗೆ ಸೂಕ್ತವಾದ ಮಾಹಿತಿಯನ್ನೇ ಒದಗಿಸದೆ ಮನೆಗಳಿಗೆ ಸ್ಟಿಕರ್ ಅಂಟಿಸುವ ಕಾರ್ಯ ನಡೆದಿದೆ. ಇದನ್ನು ಹರಿಯಬಾರದು ಎಂದು ಅದರಲ್ಲಿ ಹೇಳಿದ್ದರೂ ಅರಿವು ಇಲ್ಲದ ಅನೇಕ ಮನೆಗಳವರು ಹರಿದು ಬಿಸಾಡಿದ್ದಾರೆ. ಈ ಸಭೆಯ ಬಗ್ಗೆಯೂ ನಿನ್ನೆ ಮಾಹಿತಿ ನೀಡಲಾಗಿದೆ. ಸಮೀಕ್ಷೆ ಕುರಿತಂತೆಯೂ ಸಾಕಷ್ಟು ಗೊಂದಲಗಳು ಇರುವಾಗ ಸಾರ್ವಜನಿಕವಾಗಿ ಈ ಬಗ್ಗೆ ಮಾಹಿತಿ ನೀಡದೆ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಆಕ್ಷೇಪಿಸಿದರು.