ವಸತಿ ಸಮುಚ್ಛಯದಲ್ಲಿ ಗಾಂಜಾ ಮಾರಾಟ: 11 ವಿದ್ಯಾರ್ಥಿಗಳ ಸೆರೆ
ಮಂಗಳೂರು: ವಸತಿ ಸಮುಚ್ಛಯದಲ್ಲಿ ಗಾಂಜಾ ಶೇಖರಿಸಿಟ್ಟ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಹನ್ನೆರಡು ಕೆಜಿ ಗಾಂಜಾ ಸಹಿತ ಹನ್ನೊಂದು ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
ಬಂಧಿತರನ್ನು ಕೇರಳ ಮೂಲದ ಅದ್ವೈತ್ ಶ್ರೀಕಾಂತ್, ಮುಹಮ್ಮದ್ ಅಪ್ಸಿನ್, ಮುಹಮ್ಮದ್ ಸ್ವಾನೀದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ.ಕೆ, ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ, ಮೊಹಮ್ಮದ್ ಜಾಸೀಲ್ ವಿ, ಸಿದಾನ್ ಪಿ ಎನ್ನಲಾಗಿದೆ. ಬಂಧಿತರೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಪುಟ್ಟರಾಮ್ ಸಿ ಹೆಚ್ ಮತ್ತು ಮಲ್ಲಿಕ್ ಜಾನ್ ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಡೆಸುತ್ತಿದ್ದ ವೇಳೆ ಮಂಗಳೂರು ನಗರ ಅತ್ತಾವರ ಕಾಪ್ರಿಗುಡ್ಡೆ ಮಸೀದಿ ಬಳಿ ಇರುವ ವಸತಿ ಸಮುಚ್ಛಯದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಖರೀದಿಸಿ ತಂದು ಶೇಖರಿಸಿಟ್ಟಿರುವ ಮಾಹಿತಿ ದೊರೆತಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶೀತಲ್ ಅಲಗೂರು ಅವರು ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ ಅತ್ತಾವರ ಕಾಫ್ರಿಗುಡ್ಡೆಯಲ್ಲಿರುವ ಅಪಾರ್ಟಮೆಂಟ್ ಮೇಲೆ ದಾಳಿ ನಡೆಸಿದ್ದಾರೆ ಈ ವೇಳೆ ಕೊಠಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಸುಮಾರು 12 ಕೆ.ಜಿ 264 ಗ್ರಾಮ್ ಗಾಂಜಾ ಪತ್ತೆಯಾಗಿದ್ದು ಇದನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಇದರಲ್ಲಿ ಭಾಗಿಯಾಗಿದ್ದ ಹನ್ನೊಂದು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜೊತೆಗೆ ಆರೋಪಿಗಳಿಂದ 2 ಡಿಜಿಟಲ್ ತೂಕ ಮಾಪನಗಳು (ಅಂದಾಜು ಮೌಲ್ಯ 2,000) ಮತ್ತು ಆರೋಪಿಗಳ ವಶದಿಂದ ಒಟ್ಟು 11 ಮೊಬೈಲ್ ಫೋನ್ (ಅಂದಾಜು ಮೌಲ್ಯ 1,05,000)ಗಳನ್ನು ಸೇರಿ ಒಟ್ಟು 3,52,280 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.