ಸೆ.21ರಿಂದ ‘ಯೋಗ ಏಕಾಹ-2025’

ಸೆ.21ರಿಂದ ‘ಯೋಗ ಏಕಾಹ-2025’

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಕರ್ನಾಟಕ ಹಾಗೂ ಪ್ರತಾಪನಗರದ ಕೇಶವ ಸ್ಮೃತಿ ಸಂವರ್ಧನ ಸಮಿತಿ ಜಂಟಿಯಾಗಿ ನಗರದ ಮಣ್ಣಗುಡ್ಡ ಪ್ರತಾಪನಗರ ಸಂಘನಿಕೇತನದಲ್ಲಿ ಸೆ.21ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 7ರವರೆಗೆ ಒಂದು ದಿನದ ಯೋಗಾಸನ ಪ್ರದರ್ಶನದ ಯೋಗೋತ್ಸವ ಕಾರ್ಯಕ್ರಮ ‘ಯೋಗ ಏಕಾಹ -2025’ ಆಯೋಜಿಸಿದೆ.

ಬೆಳಗ್ಗೆ 6 ಗಂಟೆಗೆ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸುವರು. ಕೆರಿಯರ್ ಕೌನ್ಸೆಲರ್ ರಾಜೇಶ್ವರಿ ಡಿ. ಶೆಟ್ಟಿ ಅತಿಥಿಯಾಗಿ ಭಾಗವಹಿಸುವರು. ಸಂಜೆ 6ಕ್ಕೆ ಸಮಾರೋಪ ಸಮಾರಂಭದಲ್ಲಿ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ರೋಟರಿ ಕ್ಲಬ್ ಮಂಗಳೂರು ನಾರ್ತ್ ಅಧ್ಯಕ್ಷ ಡಾ.ಎಂ.ಎಸ್. ಅರುಣ್ಕುಮಾರ್ ಶೆಟ್ಟಿ ಭಾಗವಹಿಸುವರು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಏಕನಾಥ ಬಾಳಿಗಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ 10 ಪ್ರತಿಷ್ಠಿತ ಯೋಗಾಭ್ಯಾಸವನ್ನು ಕಲಿಸುವ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಪ್ರತಿ ಸಂಸ್ಥೆಯ ತಂಡವು 30 ನಿಮಿಷಗಳ ಕಾಲ ವಿವಿಧ ಯೋಗಾಸನಗಳನ್ನು ಹಾಗೂ ಸೂರ್ಯನಮಸ್ಕಾರ ಪ್ರದರ್ಶಿಸಲಿದ್ದಾರೆ. ೮ ಮಂದಿ ನುರಿತ ಹಾಗೂ ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಯೋಗ ಪಟುಗಳು ವೈಯಕ್ತಿಕ ಯೋಗಾಸನ ಮಾಡುವರು. ಗುರು ನಮಸ್ಕಾರ ಹಾಗೂ ಯೋಗ ಗುಚ್ಛಗಳು ಪ್ರದರ್ಶನಗೊಳ್ಳಲಿವೆ ಎಂದರು. 

ಬೆಳಿಗ್ಗೆ 6ರಿಂದ ಆರಂಭಗೊಂಡು ಸಂಜೆ 6ರ ವರೆಗೆ ನಡೆಯುವ ಈ ಕಾರ್ಯಕ್ರಮವು ಸ್ಪರ್ಧಾತ್ಮಕವಾಗಿರದೆ ಉತ್ಕೃಷ್ಟ ಮಟ್ಟದ ಹಾಗೂ ಕೇವಲ ಪ್ರದರ್ಶನದ ಮಹತ್ವ ಹೊಂದಿರುತ್ತದೆ. ಪ್ರತಿಷ್ಠಾನವು ಈ ವಿನೂತನ ಕಾರ್ಯಕ್ರಮವನ್ನು 2023ರಿಂದ ನಡೆಸಿಕೊಂಡು ಬರುತ್ತಿದೆ. ವಿವಿಧ ಸಂಸ್ಥೆಗಳು ಒಂದೇ ವೇದಿಕೆಯ ಮೇಲೆ ಪ್ರದರ್ಶನಾತ್ಮಕವಾಗಿ ಆಸನಗಳನ್ನು ಮಾಡಿತೋರಿಸಲಿದ್ದಾರೆ. ಈ ಮೂಲಕ ಹೆಚ್ಚು ಜನರಿಗೆ ಯೋಗಾಭ್ಯಾಸದಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ನಮ್ಮ ಉದ್ದೇಶ. 200 ಮಂದಿ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 500-750 ಮಂದಿ ವೀಕ್ಷಕರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಧನಂಜಯ ಕೆ., ಪ್ರಮುಖರಾದ ಜಯಲಕ್ಷ್ಮಿ ಚಂದ್ರಹಾಸ, ಪ್ರಭಾ ಚಂದ್ರಶೇಖರ್, ಅರುಣ್ ಕುಮಾರ್, ಕೌಶಿಕ್ ಶಾ, ಜನಾರ್ದನ ಭಕ್ತ ಉಪಸ್ಥಿತರಿದ್ದರು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article